ವಿಜಯನಗರ ಜಿಲ್ಲೆರಚನೆ ಆನಂದ್ ಸಿಂಗ್ ಸರ್ವಾಧಿಕಾರಿ ಧೋರಣೆಗೆ ನಬಿ ಖಂಡನೆ

ಕೂಡ್ಲಿಗಿ.ನ.21:- ವಿಜಯನಗರ ಜಿಲ್ಲೆಯನ್ನು ಮಾಡಲೊರಟಿರುವ ಆನಂದ್ ಸಿಂಗ್ ಅವರು ಪಶ್ಚಿಮ ತಾಲೂಕುಗಳ ಯಾವ ಶಾಸಕರನ್ನು ಕೇಳಿ ಈ ತೀರ್ಮಾನಕೈಗೊಂಡಿದ್ದಾರೆ, ವಿಜಯನಗರ ಜಿಲ್ಲೆಯನ್ನು ಮಾಡಲು ನಮ್ಮ ಅಡ್ಡಿ ಇಲ್ಲ ಆದರೆ ಔಪಚಾರಿಕವಾಗಿ ಈ ಭಾಗದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆ ಮಾಡುವುದನ್ನು ಬಿಟ್ಟು ನಿರಂಕುಶ ಪ್ರಭುತ್ವದಂತೆ ನಿರ್ಧಾರ ಕೈಗೊಳ್ಳುವುದು ಉತ್ತಮ ಬೆಳವಣಿಗೆಯಲ್ಲ ಎಂದು ಮಾಜಿ ಸಚಿವ ಎನ್.ಎಂ.ನಬಿ ಅವರು ಅಭಿಪ್ರಾಯವ್ಯಕ್ತಪಡಿಸಿದರು.
ಅವರು ಶುಕ್ರವಾರ ಪಟ್ಟಣದ ಅವರ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಬಳ್ಳಾರಿ ಜಿಲ್ಲೆಗೆ ಪುರಾತನ ಇತಿಹಾಸವಿದ್ದು ಕರ್ನಾಟಕ ಏಕೀಕರಣ, ಹಂಪಿಯ ಗತ ವೈಭವದ ಇತಿಹಾಸ ಬಳ್ಳಾರಿಯೊಂದಿಗೆ ಮೇಳೈಸಿದ್ದು ಇಂದು ಜಿಲ್ಲೆ ವಿಭಜಿತವಾಗುತ್ತಿರುವುದು ಖೇದಕರ, ಆಡಳಿತ ದೃಷ್ಠಿಯಿಂದ ಹೊಸಪೇಟೆ ಜಿಲ್ಲೆಯಾಗುವುದಕ್ಕೆ ಸೂಕ್ತವಿಲ್ಲ, ಹೊಸಪೇಟೆಯ ಸುತ್ತಮುತ್ತ ಬೆಟ್ಟಗಳು, ತುಂಗಾಭದ್ರ ನದಿ, ಹಂಪಿ ಇರುವುದ್ದರಿಂದ ಜಿಲ್ಲೆಗೆ ಬೇಕಾದ ಭೌಗೋಳಿಕ ಪ್ರದೇಶದ ಕೊರತೆ ಇದೆ ಅಲ್ಲದೇ ಪಶ್ಚಿಮ ತಾಲೂಕುಗಳಿಗೆ ಹೊಸಪೇಟೆ ಕೊನೆಯ ತಾಲೂಕಾಗುತ್ತದೆ ಈಗಾಗಿ ಹಗರಿಬೊಮ್ಮನಹಳ್ಳಿ ಪಶ್ಚಿಮ ತಾಲೂಕುಗಳಿಗೆ ಜಿಲ್ಲೆಯಾಗಲು ಯೋಗ್ಯಪ್ರದೇಶವಾಗಿದೆ ಎಂದು ತಿಳಿಸಿದರು.
ವಿಜಯನಗರ ಜಿಲ್ಲೆ ಆಗುವುದು ಖಂಡಿತಃ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಆನಂದ್ ಸಿಂಗ್ ಮಾತಿಗೆ ಯಡಿಯೂರಪ್ಪ ಅವರು ಮಣಿದು ವಿಜಯನಗರ ಜಿಲ್ಲೆ ಮಾಡುವುದು ಖಂಡಿತ ಆದರೆ ಕೂಡ್ಲಿಗಿಯನ್ನು ಯಾವುದೇ ಕಾರಣಕ್ಕೂ ವಿಜಯನಗರ ಜಿಲ್ಲೆಯಿಂದ ವಂಚಿತವಾಗದಂತೆ ಆನಂದ್ ಸಿಂಗ್ ನೋಡಿಕೊಳ್ಳಬೇಕು, ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರಿಗೂ ಸಹ ಕೂಡ್ಲಿಗಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರಿಸುವ ಇಚ್ಚೆ ಇದೆ ಎಂದು ಕೂಡ್ಲಿಗಿಯ ಮಾಜಿ ಸಚಿವ ಹಾಗೂ ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷರು ಎನ್.ಎಂ.ನಬಿ ಅವರು ತಿಳಿಸಿದರು.
ಯಡಿಯೂರಪ್ಪ ಅವರಿಗೆ ಕಳೆದ ವರ್ಷವೇ ಪತ್ರ ಬರೆದಿದ್ದೆಃ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಳೆದ ವರ್ಷದ ಸೆ.19ರಂದೇ ಕೂಡ್ಲಿಗಿಯನ್ನು ವಿಜಯನಗರ ಜಿಲ್ಲೆ ಘೋಷಣೆಯಾದಲ್ಲಿ ವಿಜಯನಗರ ಜಿಲ್ಲೆಗೆ ಸೇರ್ಪಡೆ ಮಾಡಬೇಕೆಂದು ಅಂದೇ ಮನವಿ ನೀಡಿದ್ದೆ ಯಡಿಯೂರಪ್ಪನವರು ಖಂಡಿತಾ ಕೂಡ್ಲಿಗಿಯನ್ನು ವಿಜಯನಗರ ಜಿಲ್ಲೆಗೆ ಸೇರ್ಪಡಿಸುವ ಭರವಸೆ ನೀಡಿದ್ದರು ಎಂದು ಎನ್.ಎಂ.ನಬಿ ತಿಳಿಸಿದರು.