ವಿಜಯನಗರ ಜಿಲ್ಲೆಯ ಸಮಸ್ಯೆಗಳ ನಿವಾರಣೆಗೆ ಶಾಸಕ ಗವಿಯಪ್ಪಗೆ ಸಚಿವಸ್ಥಾನ ಅಗತ್ಯ


ಸಂಜೆವಾಣಿ ಪ್ರತಿನಿಧಿಯಿಂದ   
ಹೊಸಪೇಟೆ ಮೇ17: ನೂತನ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಹಲವು ಸವಾಲುಗಳಿದ್ದು, ಸಮರ್ಥವಾಗಿ ಎದುರಿಸಲು ಸಚಿವಸ್ಥಾನ ಅಗತ್ಯವಾಗಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಶಾಸಕ ಎಚ್.ಆರ್. ಗವಿಯಪ್ಪನವರ ಎದುರು ಹಲವು ಸಮಸ್ಯೆಗಳಿವೆ. ಜನರಿಗೆ ಕೊಟ್ಟ ಆಶ್ವಾಸನೆಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಿದೆ. ಜಿಲ್ಲಾ ರಚನೆಯ ರೂವಾರಿ ಮೂರು ಚುನಾವಣೆ ಹಾಗೂ ಒಂದು ಬಾರಿ ಉಪಚುನಾವಣೆ ಸೇರಿದಂತೆ ಮೂರು ಮುಖ್ಯಮಂತ್ರಿಗಳ ಕೈಯಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ ಆನಂದಸಿಂಗ್ ಸ್ಥಾನ ತುಂಬಲು ಶಾಸಕ ಗವಿಯಪ್ಪ ಸಮರ್ಥರಿದ್ದು ಕೇವಲ ಶಾಸಕಸ್ಥಾನದಿಂದ ಈ ಕಾರ್ಯ ಕಷ್ಟಸಾಧ್ಯ, ಬಿಜೆಪಿಯ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ಅವರ ವಿರುದ್ಧ 33 ಸಾವಿರ ಮತಗಳ ಅಂತರದಿಂದ ಗೆದ್ದಿರುವ  ಎಚ್.ಆರ್.ಗವಿಯಪ್ಪ ಕಾಂಗ್ರೆಸ್‍ನಲ್ಲಿ ಎರಡನೇ ಅವಧಿಗೆ ಶಾಸಕರಾಗಿದ್ದಾರೆ, ವಿದ್ಯಾವಂತರು ಹಾಗೂ ಕಾಂಗ್ರೆಸ್ ಪರಂಪರೆಯ ಕುಟುಂಬದಿಂದ ಬಂದಿರುವ ಗವಿಯಪ್ಪ ಕ್ಷೇತ್ರದ ಸಮಸ್ಯಗಳಿಗೆ ಸ್ಪಂಧಿಸಲು ಸೂಕ್ತವಾಗಿದ್ದಾರೆ. ನೂತನ ಜಿಲ್ಲಾ ಕೇಂದ್ರವಾದ ವಿಜಯನಗರದಲ್ಲಿ ಇಂತಹ ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ ಈ ಕಾರ್ಯಕ್ಕೆ ಸಚಿವಸ್ಥಾನ ಸಹಕಾರಿಯಾಗಬಲ್ಲದು
ಅವರಿಗೆ ಕ್ಷೇತ್ರದಲ್ಲಿ ನೂರಾರು ಸಮಸ್ಯೆಗಳು ಎದುರಾಗಲಿವೆ, ಅವುಗಳನ್ನು ಯಾವ ರೀತಿಯಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹರಿಸುತ್ತಾರೆ ಎಂಬ ಚರ್ಚೆಗಳು ಆರಂಭವಾಗಿವೆ. ಕ್ಷೇತ್ರದಲ್ಲಿ ರೈತರು, ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಿ, ಗವಿಯಪ್ಪನವರು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಿದೆ. ಹಾಗಾಗಿ ಹೊಸ ಶಾಸಕರು ಕ್ಷೇತ್ರದ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ, ಅವುಗಳಿಗೆ ಪರಿಹಾರ ನೀಡಬೇಕು ಎಂಬುದು ಜನರ ಆಶಯವಾಗಿದೆ.
ಶಾಸಕರ ಮುಂದಿರುವ ಸವಾಲುಗಳು.
*ಜಿಲ್ಲಾ ಕೇಂದ್ರದ ಪೂರ್ಣ ರಚನೆ. * ಸಕ್ಕರೆ ಕಾರ್ಖಾನೆ ಆರಂಭ. * ಪ್ರವಾಸೋದ್ಯಮ ವೃದ್ಧಿ, ಉದ್ಯೋಗ ಸೃಷ್ಟಿ.  * ಬಡವರಿಗೆ ಸೂರು. * ಏತ ನೀರಾವರಿ ಯೋಜನೆ. * ಮೆಡಿಕಲ್ ಕಾಲೇಜ್ ಆರಂಭ. * ಸದ್ಯ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವುದು.