ವಿಜಯನಗರ ಜಿಲ್ಲೆಯ ಗೃಹಜ್ಯೋತಿ ಯೋಜನೆ ಚಾಲನೆ ಶೇ73 ಗೃಹಜ್ಯೋತಿ ನೋಂದಣಿ ಪ್ರಕ್ರಿಯೆ ಪೂರ್ಣ


ಸಂಜೆವಾಣಿ ವಾರ್ತೆ
ಹೊಸಪೇಟೆ ಆ6: ಗೃಹಜ್ಯೋತಿ ಯೋಜನೆಗೆ ವಿಜಯನಗರ ಜಿಲ್ಲೆಯಲ್ಲಿ ಒಟ್ಟು 2,92,588 ಜನ ವಿದ್ಯುತ್ ಗ್ರಾಹಕರು ನೋಂದಾಯಿಸಿದ್ದು, ಶೇ73ರಷ್ಟು ನೋಂದಣಿ ಪೂರ್ಣವಾಗಿದೆ. ನೋಂದಣಿಗೆ ಯಾವುದೇ ಕೊನೆ ದಿನಾಂಕ ಇರುವುದಿಲ್ಲ, ಗ್ರಾಹಕರು ಸೇವಾ ಸಿಂಧು ಮೂಲಕ ನೋಂದಣಿ ಕೈಗೊಳ್ಳಬಹುದು ಎಂದು ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀನಿವಾಸ್ ಜಿ.ಜೆ. ಹೇಳಿದರು.
ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸರ್ಕಾರದ ಮಹತ್ವಾ ಕಾಂಕ್ಷಿಯ ಗೃಹಜ್ಯೋತಿ ಯೋಜನೆಯ ಚಾಲನೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಉಚಿತ ಬೆಳಕು, ಸುಸ್ಥಿರ ಬದುಕು ಎಂಬ ಘೋಷಣೆಯ ಘೋಷವಾಕ್ಯದಡಿ ಜಿಲ್ಲೆಯಲ್ಲಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಆ.1ರಿಂದ ಜಾರಿಗೆ ಬರುವಂತೆ ಗೃಹಜ್ಯೋತಿ ಯೋಜನೆಯ ಅಡಿಯಲ್ಲಿಯೇ ಈ ಹಿಂದೆ ನೀಡಲಾಗುತ್ತಿದ್ದ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಹಾಗೂ ಅಮೃತಜ್ಯೋತಿ ಯೋಜನೆಯನ್ನು ಒಳಪಟ್ಟು 200 ಯುನಿಟ್ ವಿದ್ಯುತ್ ಬಳಕೆಗೆ ಉಚಿತ ಒದಗಿಸಲಾಗುತ್ತಿದೆ. ಜು.27ರ ಒಳಗಾಗಿ ಅರ್ಜಿ ಸಲ್ಲಿಸಿದ ಗ್ರಾಹಕರಿಗೆ ಅಗಸ್ಟ್ ತಿಂಗಳ ವಿದ್ಯುತ್ ಬಿಲ್ ಉಚಿತವಾಗಿ ಜಾರಿಯಾಗಲಿದೆ. ಜು.27ರ ನಂತರ ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ಮುಂದಿನ ತಿಂಗಳಿನಿಂದ ಯೋಜನೆ ಜಾರಿಯಾಗಲಿದೆ ಎಂದರು.
ಗೃಹಜ್ಯೋತಿ ಯೋಜನೆಗೆ ಜೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಒಟ್ಟು ಗ್ರಾಹಕರಲ್ಲಿ ಜು.27ರ ಒಳಗಾಗಿ ಒಟ್ಟು 20,21,996 ಫಲಾನುಭವಿಗಳು ನೋಂದಾಯಿಸಿದ್ದು, ವಿಜಯನಗರ ಜಿಲ್ಲೆಯಲ್ಲಿ ಒಟ್ಟು 3,50,227 ಜನಗ್ರಾಹಕರ ಪೈಕಿ 2,92,588 ಜನ ಫಲಾನುಭವಿಗಳು ನೋಂದಾಯಿಸಿದ್ದಾರೆ. ಒಟ್ಟು 2,63,329 ಜನ ಫಲಾನುಭವಿಗಳು ಗೃಹಜ್ಯೋತಿ ಲಾಭವನ್ನು ಪಡೆದುಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಹರಪನಹಳ್ಳಿ ಕ್ಷೇತ್ರದ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿ, ವರಕವಿ ಬೇಂದ್ರೆಯವರ ಬೆಳಗು ಕಾವ್ಯದಂತೆ ಮೂಡಲದಿಂದ ಬರುವ ಸೂರ್ಯನಂತೆ ಸರ್ಕಾರದಿಂದ ಪ್ರತಿ ಫಲಾನುಭವಿಗೆ ಉಚಿತ ವಿದ್ಯುತ್ ಇನ್ಮುಂದೆ ದೊರೆಯಲಿದೆ. ಗ್ಯಾರಂಟಿ ಯೋಜನೆಗಳು ಹಂತ ಹಂತವಾಗಿ ಜಾರಿಯೋಗುತ್ತಿದ್ದು, ಕ್ಷೇತ್ರದ ಅಭಿವೃದ್ಧಿಗೂ ಮುಂದಿನ ದಿನಗಳಲ್ಲಿ ಅನುದಾನ ದೊರೆಯಲಿದೆ ಎಂದರು.
ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ಅರ್ಹ ಎಲ್ಲಾ ವಿದ್ಯುತ್ ಗ್ರಾಹಕರಿಗೂ ಉಚಿತ ವಿದ್ಯುತ್ ಯೋಜನೆ ಸರ್ಕಾರದಿಂದ ಜಾರಿಯಾಗಿದೆ. ಫಲಾನುಭವಿಗಳಿಗೆ ಯೋಜನೆ ತಲುಪಿಸಲು ಜೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮವಹಿಸಿದ್ದಾರೆ. ಸಾಮಾನ್ಯವಾಗಿ ಗ್ರಾಹಕರಿಗೆ ಸರಾಸರಿ 53 ಯುನಿಟ್ ಉಪಯೋಗ ಆಗುತ್ತದೆ. ಸರ್ಕಾರ ಅದರ ನಾಲ್ಕು ಪಟ್ಟು ಉಚಿತವಾಗಿ ನೀಡುತ್ತಿದೆ. ಸರ್ಕಾರದಿಂದ ಜನರು ಜೀವನ ಮಟ್ಟ ಸುಧಾರಣೆಗೆ ಇದು ಸಹ ಕಾರಣವಾಗುತ್ತದೆ. ನೌಕರರ ಶ್ರಮವನ್ನು ಎಲ್ಲರೂ ಗುರುತಿಸಬೇಕು ಎಂದರು.
ಹೊಸಪೇಟೆ ನಗರ ಮತ್ತು ಗ್ರಾಮೀಣ ಭಾಗದ ಜೆಸ್ಕಾಂ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಗ್ರಾಹಕರಿಗೆ ಸಾಂಕೇತಿಕವಾಗಿ ಶೂನ್ಯ ಮೊತ್ತದ ವಿದ್ಯುತ್ ಬಿಲ್  ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ., ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಹಗರಿಬೊಮ್ಮನಹಳ್ಳಿ ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಶೇಖರ್ ಬಹುರೂಪಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತೇಜಾನಾಯ್ಕ, ಹುಲಿರಾಜ್ ಸೇರಿದಂತೆ ಜೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ತಾಲ್ಲೂಕುವಾರು ಅಂಕಿ ಅಂಶಗಳು:
ಹೊಸಪೇಟೆ ನಗರ ವಿಭಾಗ
ನಗರ ಉಪವಿಭಾಗ-1ರ ಒಟ್ಟು 24,570 ಜನ ಬಳಕೆದಾರರಲ್ಲಿ 19,656 ಜನಗ್ರಾಹಕರು ನೋಂದಾಯಿಸಿದ್ದಾರೆ.
ನಗರ ಉಪವಿಭಾಗ-2ರ ಒಟ್ಟು 36,906 ಜನ ಬಳಕೆದಾರರಲ್ಲಿ, 29,524 ಜನಗ್ರಾಹಕರು ನೋಂದಾಯಿಸಿದ್ದಾರೆ.
ಗ್ರಾಮೀಣ ಉಪವಿಭಾಗದಲ್ಲಿಒಟ್ಟು 35,150 ಜನ ಬಳಕೆದಾರರ ಪೈಕಿ 28,120 ಜನ ನೋಂದಾಯಿಸಿದ್ದಾರೆ.
ಹಗರಿಬೊಮ್ಮನಹಳ್ಳಿ ವಿಭಾಗ
ಹಡಗಲಿ ಉಪವಿಭಾಗದಲ್ಲಿ 37,619 ಜನ ಬಳಕೆದಾರರ ಪೈಕಿ 30,095 ಜನ ನೋಂದಾಯಿಸಿದ್ದಾರೆ.
ಹಗರಿಬೊಮ್ಮನಹಳ್ಳಿ ಉಪವಿಭಾಗದಲ್ಲಿಒಟ್ಟು 44,056 ಜನ ಬಳಕೆದಾರರ ಪೈಕಿ 35,245 ಜನ ನೋಂದಾಯಿಸಿದ್ದಾರೆ.
ಕೂಡ್ಲಿಗಿ ಉಪವಿಭಾಗ 67,489 ಬಳಕೆದಾರರ ಪೈಕಿ 53,991 ಜನ ನೋಂದಾಯಿಸಿದ್ದಾರೆ.
ಹರಪನಹಳ್ಳಿ ಉಪವಿಭಾಗ 35,745 ಜನ ಬಳಕೆದಾರರ ಪೈಕಿ 32,977 ಜನ ನೋಂದಾಯಿಸಿದ್ದಾರೆ.
ತೆಲಗಿ ಉಪವಿಭಾಗದಲ್ಲಿ 68,692 ಜನ ಬಳಕೆದಾರರ ಪೈಕಿ 62,979 ಜನ ನೋಂದಾಯಿಸಿದ್ದಾರೆ.
ಜಿಲ್ಲೆಯಲ್ಲಿಒಟ್ಟು 3,50,227 ಜನ ಬಳಕೆದಾರರ ಪೈಕಿ 2,92,588 ಜನ ನೋಂದಾಯಿಸಿದ್ದಾರೆ.

One attachment • Scanned by Gmail