
ಸಂಜೆವಾಣಿ ವಾರ್ತೆ
ಹೊಸಪೇಟೆ: ಶಿಕ್ಷಕರು ತರಗತಿ ಕೋಣೆಯಲ್ಲಿ ಸಂಶೋಧಕರಾಗಿದ್ದು ಸದಾ ಪ್ರಯೋಗಶೀಲ ಗುಣಹೊಂದಿದ್ದರೆ ಮಾತ್ರ ಅದು ಗುಣಮಟ್ಟದ ಕಲಿಕೆಗೆ ನೆರವಾದಂತಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಚನ್ನಬಸಪ್ಪ ಹೇಳಿದರು.
ಮಂಗಳವಾರ ಜಿಲ್ಲೆಯ ಹೊಸ ಮಲಪನಗುಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಇಂಡಿಯಾ ಫೌಂಡೇಷನ್ ಫಾರ್ ದಿ ಆಟ್ರ್ಸ್, ಕಲಿಕಲಿಸು ಯೋಜನೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ವಿಜಯನಗರ ಜಿಲ್ಲೆಯ ಕಲಾಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಣ ಸಬಲೀಕರಣಕ್ಕಾಗಿ ಇಂಡಿಯಾ ಫೌಂಡೇಷನ್ ಫಾರ್ ದಿ ಆಟ್ರ್ಸ್, ಕಲಿಕಲಿಸು ಯೋಜನೆ ಶಿಕ್ಷಣ ಇಲಾಖೆಯ ಜೊತೆಯಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾದುದು ಎಂದು ಹೇಳಿದರು.
ಕಲಿಕಲಿಸು ಕಾರ್ಯಕ್ರಮ ನಿರ್ವಹಣಾ ಅಧಿಕಾರಿ ರಾಧಿಕಾ ಭಾರಧ್ವಾಜ ಮಾತನಾಡಿ, ನಮ್ಮ ಸಂಸ್ಥೆಯಿಂದ ವಿಜಯನಗರ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿನ ನಲ್ವತ್ತು ಶಾಲೆಗಳಲ್ಲಿ ಕಲಾಯಾತ್ರೆ ನಡೆಯಲಿದೆ. ಕಲಿಕಲಿಸು ಎನ್ನುವುದು ಪಠ್ಯಬೋಧನಾ ಕಾರ್ಯದಲ್ಲಿ ಶಿಕ್ಷಕರು ಕಲಾ ಮಾಧ್ಯಮವನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಲ್ಲಿ ಕಲಿಕೆಯನ್ನು ನಿರಂತರ ಕ್ರಿಯೆಯಾನ್ನಾಗಿಸುವ ಯೋಜನೆಯಾಗಿದೆ. ಕಥೆ, ಹಾಡು, ನಾಟಕ, ಚಿತ್ರಕಲೆ ಮತ್ತು ಯಾವುದೇ ಸ್ಥಳೀಯ ಕಲಾ ಪ್ರಕಾರಗಳ ಶಾಲಾ ಕೊಠಡಿಯನ್ನು ದಾಟಿ ಹೊರ ಜಗತ್ತಿನೊಂದಿಗೆ ವಿಶೇಷವಾದ ಸಂಬಂಧವನ್ನು ಗಟ್ಟಿಯಾಗಿ ಕಟ್ಟಿಕೊಡುವ ಸೃಜನಶೀಲ ನಡೆಯಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಕೊಟ್ರೇಶ.ಬಿ ಮಾತನಾಡಿ, ಇಂಡಿಯಾ ಫೌಂಡೇಶನ್ ಫಾರ್ ಡಿ ಆಟ್ರ್ಸ್, ಕಲಿಕಲಿಸು ವಿಭಾಗ, ಸರ್ಕಾರಿ ಶಾಲೆಗಳನ್ನು ಹಾಗೂ ಶಿಕ್ಷಕರನ್ನು ಅಭಿವೃದ್ಧಿಪಡಿಸುವುದಕ್ಕೆ ಅನುದಾನ ಹಾಗೂ ತರಬೇತಿ ಹಮ್ಮಿಕೊಂಡಿರುವುದು ಶ್ಲಾಘನೀಯವಾದ ಕಾರ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ವಿವಿಧ ಚಟುವಟಿಕೆಗಳನ್ನು ಮಾಡಿಸಲಾಯಿತು. ಶಿಕ್ಷಕರಿಗೆ ಕಲಾಂತರ್ಗತ ಯೋಜನೆ ತಯಾರಿಕೆ, ಮಾದರಿ ಯೋಜನೆಗಳ ಪರಿಚಯ ಮಾಡಿಸಲಾಯಿತು. ಸಂಪನ್ಮೂಲ ವ್ಯಕ್ತಿ ಸಿದ್ದಪ್ಪ ಬಿರಾದಾರ ಗೊಂಬೆಗಳ ಮೂಲಕ ಹೇಗೆ ಕಲಾ ಅಂತರ್ಗತಗೊಳಿಸಬಹುದು ಎಂಬುದಾಗಿ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು. ಜನಪದ ಕಲಾವಿದ ಶಂಕ್ರಣ್ಣ ಸಂಕನಾಳ, ಸಂಪನ್ಮೂಲ ವ್ಯಕ್ತಗಳಾದ ಕಿಶನರಾವ್ ಕುಲಕರ್ಣಿ, ಕೊಟ್ರೇಶ.ಬಿ, ಜಹಾನ್ ಆರಾ, ಸಿದ್ದು ಬಿರಾದಾರ, ಬೇಬಿ ಬಿರಾದಾರ, ರಿಯಾಜ್ ಇದ್ದರು. ಮುಖ್ಯ ಶಿಕ್ಷಕ ಹುಲಗಪ್ಪ ಅಧ್ಯಕ್ಷತೆವಹಿಸಿ ಮಾತನಾಡಿದರು. ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.