ವಿಜಯನಗರ ಜಿಲ್ಲೆಯಲ್ಲಿಯೂ ಆರಂಭವಾದ “ವೀಕೆಂಡ್ ಲಾಕ್‍ಡೌನ್”

ಹೊಸಪೇಟೆ ಏ24: ಕೋವಿಡ್ ಹರಡದಂತೆ ಮುಂಜಾಗ್ರತ ಕ್ರಮವಾಗಿ ರಾಜ್ಯ ಸರ್ಕಾರದ ಘೋಷಣೆಯಂತೆ ವೀಕೆಂಡ್ ಲಾಕ್‍ಡೌನ್ ಹೊಸಪೇಟೆ ಸೇರಿದಂತೆ ವಿಜಯನಗರ ಜಿಲ್ಲೆಯಲ್ಲಿಯೂ ಆರಂಭವಾಗಿದೆ.
ಅಗತ್ಯ ವಸ್ತು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳು ಲಾಕ್ ಆಗಿವೆ. ಜನರು ಒಂದಡೆ ಸೇರದಂತೆ ಮಾಡಲು ಮುಂದಾಗಿರುವ ಆಡಳಿತ ನಗರದ ವಿವಿಧ ಕಡೆ ತಾತ್ಕಾಲಿಕವಾಗಿ ತರಕಾರಿ ಮಾರ್ಕೆಟ್ ತೆರೆದಿದ್ದು ಬಹುತೇಕ 10 ಗಂಟೆಯೊಳಗೆ ತಮ್ಮಗೆ ಬೇಕಾದ ವಸ್ತುಗಳನ್ನು ಅಷ್ಟರೊಳಗೆ ಪಡೆಯಲು ಅನುಕೂಲಮಾಡಿಕೊಟ್ಟಿದೆ. ದೀಪಾಯನ ಆಂಗ್ಲ ಮಾಧ್ಯಮ ಶಾಲೆ ಮುಂದಿನ ಸಹಕಾರಿ ಮೈದಾನ, ಮುನ್ಸಿಪಲ್ ಹೈಸ್ಕೂಲ್ ಮೈದಾನ, ಟಿಬಿಡ್ಯಾಂನ ಕಾಲೇಜು ಮೈದಾನ, ಬಾಲಾ ಟಾಕೀಸ್ ಬಳಿ, ಬಳ್ಳಾರಿ ರಸ್ತೆಯ ಪಟೇಲ್ ಹೈಸ್ಕೂಲ್ ಮೈದಾನಗಳಲ್ಲಿ ತರಕಾರಿ ಮಾರ್ಕೆಟ್ ಆರಂಭ ಮಾಡಿದೆ.
ನಗರದ ಗಾಂಧಿ ವೃತ್ತ, ತರಕಾರಿ ಮಾರ್ಕೆಟ್ ಸೇರಿದಂತೆ ನಾನಾ ಕಡೆ ಹಣ್ಣು ಹಂಪಲು ಮಾರಾಟ ಮಾಡುವ ಗಾಡಿಗಳ ಬಳಿ ಮಾರ್ಕಿಂಗ್ ಮಾಡಲಾಗಿದೆ. ಇನ್ನೊಂದೆಡೆಯಲ್ಲಿ ಜನರು ಸಾಮಾಜಿಕ ಅಂತರ ಕಾಪಾಡಲು ನಗರದ ದಿನಸಿ ಅಂಗಡಿಗಳು, ಮೆಡಿಕಲ್ ಶಾಪ್‍ಗಳ ಬಳಿಯೂ ಮಾಕಿರ್ಂಗ್ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ದೈನಂದಿನ ಚಟುವಟಿಕೆ ನಡೆಸಲು ನಗರಸಭೆ ನಗರದ ನಿವಾಸಿಗಳಿಗೆ ಸೂಚಿಸಿದೆ.
ನಗರದಲ್ಲಿ ಕೊರೋನಾ ದಿನೇ ದಿನೆ ಏರಿಕೆಯಾಗುತ್ತಿದ್ದು, ಈಗಾಗಲೇ ಹೊಸಪೇಟೆಯಲ್ಲಿ 793, ಹಡಗಲಿ 193, ಹಗರಿಬೊಮ್ಮನಹಳ್ಳಿ 195, ಕೂಡ್ಲಗಿ 118 ಹರಪನಹಳ್ಳಿಯಲ್ಲಿ 185 ಸಕ್ರಿಯ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ 1486 ಪ್ರಕರಣಗಳು ಸಕ್ರೀಯವಾಗಿವೆ. ಈ ಹಿನ್ನೆಲೆಯಲ್ಲಿ ಮೇ 4 ರವರೆಗೆ ಅನೇಕ ನಿರ್ಭಂದಗಳನ್ನು ಹೇರಿದ್ದು ಶನಿವಾರ ಮತ್ತು ಭಾನುವಾರ ವೀಕೆಂಡ್ ಲಾಕ್ಡೌನ್ ಘೋಷಿಸಿದೆ. ಜನ ಸ್ಪಂದನೆ ನೀಡಿದೆ. ಈ ಮಧ್ಯ ಅಗತ್ಯವಸ್ತುಗಳ ಅಂಗಡಿಗೂ ಜನ ಬಾರದ ಸ್ಥಿತಿ ಹಲವು ಅಂಗಡಿಗಳ ಮುಂದೆ ಕಂಡುಬಂತು ಮತ್ತೊಂದಡೆ ಎಷ್ಟೇ ಮಾಹಿತಿ ನೀಡಿದರೂ ಅನಗತ್ಯವಾಗಿ ತಿರುಗುವವರ ಸಂಖ್ಯೆಯೂ ಕಡಿಮೆ ಏನು ಇರಲಿಲ್ಲ.