ವಿಜಯನಗರ ಜಿಲ್ಲೆಯನ್ನು ಎಲ್ಲರೂ ಸೇರಿ ಕಟ್ಟೋಣ ; ಟಿ.ವೆಂಕಟೇಶ್


ಸಂಜೆವಾಣಿ ವಾರ್ತೆ
ಹೊಸಪೇಟೆ ನ10: ಸಮಗ್ರ ಬಳ್ಳಾರಿ ಜಿಲ್ಲೆಯಲ್ಲಿ ಸೇವೆಯನ್ನು ಸಲ್ಲಿಸಿದ್ದು ಇಲ್ಲಿನ ಭೌಗೋಳಿಕ ಹಿನ್ನಲೆ ಹಾಗೂ ಇಲ್ಲಿನ ಜನರ ಸ್ಥಿತಿಗತಿ ತಿಳಿದಿದ್ದು ನೂತನ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ದಿ ಮಾಡಲು ಬದ್ದನಾಗಿದ್ದು ಎಲ್ಲರೂ ಸೇರಿ ವಿಜಯನಗರ ಕಟ್ಟೋಣ ಎಂದು ನೂತನ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ನಗರದ ಜಿಲ್ಲಾಡಳಿತ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನಗರ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದು ಈಗಾಗಲೇ ಒಂದು ವರ್ಷ ಪೂರೈಸಿರುತ್ತದೆ. ಈ ಹಿಂದೆ ಇದ್ದ ಜಿಲ್ಲಾಧಿಕಾರಿಯವರು ಮತ್ತು ಜಿಲ್ಲಾ ರಕ್ಷಣಾಧಿಕಾರಿಯವರು ಹಲವು ಪರಿಶ್ರಮ ಹಾಕಿದ್ದಾರೆ. ಅವರು ಹಾಕಿದ ಎಲ್ಲಾ ಕಾಮಗಾರಿಗಳನ್ನು ಮುಂದುವರೆಸುವ ಮೂಲಕ ಇನ್ನಷ್ಟು ಕೆಲಸ, ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಹಲವಾರು ಕಚೇರಿಗಳು ಬರಬೇಕಾಗಿದ್ದು ಅಧಿಕಾರಿಗಳು ಮತ್ತು ಸಿಬ್ಬಂದಿಯವರ ನೇಮಕವು ಆಗಬೇಕಾಗಿದೆ. 2023 ರ ಜನವರಿ ವೇಳೆಗೆ ನೂತನ ಜಿಲ್ಲಾಧಿಕಾರಿ ಕಚೇರಿಯನ್ನು ಉದ್ಘಾಟಿಸುವ ಮೂಲಕ ಅಲ್ಲಿಯೇ ಕಾರ್ಯನಿರ್ವಹಿಸಬೇಕೆಂಬ ಗುರಿ ಹೊಂದಲಾಗಿದೆ ಎಂದರು.
ಸಮಗ್ರ ಅಭಿವೃದ್ದಿಗೆ ಯೋಜನೆ; ವಿಜಯನಗರದಲ್ಲಿ ತುಂಗಭದ್ರ ಜಲಾಶಯ ಇದ್ದರೂ ಸಹ ವಿಜಯನಗರ ಜಿಲ್ಲೆಯ ಬಹುತೇಕ ತಾಲ್ಲೂಕುಗಳು ಮಳೆ ಆಶ್ರಯ ಹೊಂದಿವೆ. ಮತ್ತು ವಿಶ್ವ ಪಾರಂಪರಿಕ ತಾಣ ಹಂಪಿ ಅಭಿವೃದ್ದಿ ಮತ್ತು ಇಲ್ಲಿ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದವರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವುದು ಸೇರಿದಂತೆ ಅನೇಕ ಅಭಿವೃದ್ದಿ ಕೆಲಸಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜನಪ್ರತಿನಿಧಿಗಳ ಜೊತೆ ಚರ್ಚಿಸಿ ಸಮನ್ವಯತೆಯಿಂದ ಅಭಿವೃದ್ದಿಯೆಡೆಗೆ ಕೊಂಡೊಯ್ಯಬೇಕಿದೆ ಎಂದರು.
ಹಂಪಿ ಸ್ವದೇಶ ದರ್ಶನಕ್ಕೆ ಆಯ್ಕೆ; ಈ ಹಿಂದೆ ಪ್ರವಾಸೋದ್ಯಮ ಇಲಾಖೆ ನಿರ್ದೇಶಕನಾಗಿ ಕೆಲಸ ಮಾಡಿದ್ದು ಈ ವೇಳೆ ಕೇಂದ್ರ ಸರ್ಕಾರದ ಸ್ವದೇಶ ಯೋಜನೆಯಡಿ ರಾಜ್ಯದ ಐದು ಸ್ಥಳಗಳನ್ನು ಆಯ್ಕೆ ಮಾಡಿದ್ದು ಇದರಲ್ಲಿ ಹಂಪಿಯು ಸೇರಿದೆ. ಈ ಯೋಜನೆಯಡಿ ಆಯ್ಕೆಯಾದಲ್ಲಿ ಸುಮಾರು 100 ಕೋಟಿಯಷ್ಟು ಅನುದಾನ ಕೇಂದ್ರ ಸರ್ಕಾರದಿಂದ ಹಂಪಿಗೆ ಬರಲಿದೆ ಎಂದರು.
ಹಂಪಿ ಉತ್ಸವ ನಿಲ್ಲದು; ಬರುವ ಜನವರಿ 7 ಮತ್ತು 8 ರಂದು ಹಂಪಿ ಉತ್ಸವ ಮಾಡಲು ಈ ಹಿಂದೆ ದಿನಾಂಕ ನಿರ್ಧರಿಸಿದ್ದು ಅದರಂತೆ ಒಂದೆರಡು ದಿನಗಳ ಅಂತರದಲ್ಲಿ ಅಂದರೆ ಇದೇ ಸಮಯದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಸಚಿವರೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ದಿನಾಂಕವನ್ನು ಅಂತಿಮಗೊಳಿಸಲಾಗುತ್ತದೆ ಎಂದರು. ಸಹಾಯಕ ಆಯುಕ್ತ ಸಿದ್ರಾಮೇಶ್ವರ, ತಹಶೀಲ್ದಾರ್ ವಿಶ್ವಜಿತ್ ಮೆಹತಾ ಗೋಷ್ಠಿಯಲ್ಲಿ ಹಾಜರಿದ್ದರು.