ವಿಜಯನಗರ ಜಿಲ್ಲೆಗೆ ಬೇಕಿವೆ ಇನ್ನಷ್ಟು ಇಂದಿರಾ  ಕ್ಯಾಂಟಿನ್‍ಗಳು !ಕ್ಯಾಂಟಿನ್ ಬಾಕಿಯೇ ಕೋಟಿಗಟ್ಟಲೇ… ಆರಂಭವಾಗುವುದು ಹೇಗೆ ?


(ಅನಂತ ಜೋಶಿ)
ಹೊಸಪೇಟೆ, ಮೇ.30: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿಂದತೇ ‘ಇಂದಿರಾ ಕ್ಯಾಂಟಿನ್’ಗಳಿಗೂ ಮರುಜೀವ ಬಂದಂತಾಗಿದೆ. ಆದರೆ ಹಿಂದಿನ ಬಾಕಿಯೇ ಕೋಟಿಗಟ್ಟಲೆ ಇರುವಾಗ ಮತ್ತೆ ಆರಂಭವಾಗುವುದು ಸಾಧ್ಯವೇ ಎಂಬ ಪ್ರಶ್ನೆಯೂ ಸಹ ಸಹಜವಾಗಿ ಮೂಡಲಾರಂಭಿಸಿದೆ.
ಹೌದು ಎಲ್ಲರಿಗೂ ತಿಳಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಾವಧಿಯಲ್ಲಿ ಆರಂಭವಾದ ಈ ಇಂದಿರಾ ಕ್ಯಾಂಟಿನ್‍ಗಳು ಕೊನೆ ಕೊನೆಗೆ ಅನುದಾನದ ಕೊರತೆಯಿಂದ ಮುಚ್ಚುವ ಹಂತಕ್ಕೆ ಬಂದು ತಲುಪಿದವು, ನಂತರ ಅಧಿಕಾರಕ್ಕೆ ಬಂದ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಹಾಗೂ ನಂತರದ ಬಿಜೆಪಿ ಸರ್ಕಾರ ಯಾವುದೆ ಹಣವನ್ನು ಬಿಡುಗಡೆ ಮಾಡದೆ ಇಂದಿರಾ ಕ್ಯಾಂಟಿನ್ ಇದ್ದು ಇಲ್ಲದಂತೆ ಆಗಲು ಕಾರಣವಾದವು ಸ್ಥಳೀಯ ಅಧಿಕಾರಿಗಳ ಹಾಗೂ ಕೆಲವು ಹಂತದ ರಾಜಕಾರಣಿಗಳು ಈ ಜೇನುಗೂಡಿಗೆ ಕಲ್ಲುಹೊಡೆಯುವುದು ಬೇಡಾ ಎಂದು ಬಿಟ್ಟ ಪರಿಣಾಮ ಇದ್ದು ಇಲ್ಲದಂತಾಗಿ ಇದೀಗ ಸಾಲದ ಭಾದೆಯಿಂದ ನರಳಾಡುವಂತಾಗಿವೆ. 
ಇದೀಗ ಮತ್ತೆ ಸಿದ್ಧರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಇವರ ಕನಸಿನ ಕೂಸಾಗಿರುವ ‘ಇಂದಿರಾ ಕ್ಯಾಂಟಿನ್’ ಮರುಜೀವ ಪಡೆಯುವದರ ಜೊತೆ ವಿಜಯನಗರ ಜಿಲ್ಲೆಗೆ ಮತ್ತಷ್ಟು ಇಂದಿರಾ ಕ್ಯಾಂಟೀನ್‍ಗಳು ತೆರೆಯಬೇಕು ಎಂಬ ಕೂಗು ಜೋರಾಗ ತೊಡಗಿದೆ. ನೂತನ ವಿಜಯನಗರ ಜಿಲ್ಲೆಯ 6 ತಾಲೂಕುಗಳಲ್ಲಿ ಬರೀ ವಿಜಯನಗರ ಹಾಗೂ ಹಡಗಲಿ ಎರಡು ತಾಲೂಕುಗಳಲ್ಲಿ ಮಾತ್ರ ಇಂದಿರಾ ಕ್ಯಾಂಟಿನ್‍ಗಳಿದ್ದು, ಉಳಿದ ನಾಲ್ಕು ತಾಲೂಕುಗಳಲ್ಲಿ ಇಂದಿರಾ ಕ್ಯಾಂಟಿನ್‍ಗಳಿಲ್ಲದೇ, ಬಡವರು ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಜಿಲ್ಲೆಯ ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂಬುದು ಜಿಲ್ಲೆಯ ಜನರ ಒತ್ತಾಯಿಸುತ್ತಿದ್ದಾರೆ.
ಕೊಟ್ಟೂರು, ಕೂಡ್ಲಿಗಿ, ಹರಪನಹಳ್ಳಿ ಮತ್ತು ಹಗರಿಬೊಮ್ಮನಹಳ್ಳಿಯಲ್ಲಿ ಇಂದಿರಾ ಕ್ಯಾಂಟಿನ್ ಇಲ್ಲ. ಬರೀ ಎರಡು ತಾಲೂಕುಗಳಲ್ಲಿ ಮಾತ್ರ ಕ್ಯಾಂಟಿನ್ ಇದ್ದು, ಆಸ್ಪತ್ರೆ, ಮಾರ್ಕೆಟ್‍ಗೆ ಬರುವ ಗ್ರಾಮೀಣ ಮತ್ತು ನಗರ, ಪಟ್ಟಣ ಪ್ರದೇಶಗಳ ಬಡವರಿಗೆ ಅನುಕೂಲವಾಗಿದೆ. ಉಳಿದ ತಾಲೂಕುಗಳಲ್ಲೂ ಇಂದಿರಾ ಕ್ಯಾಂಟಿನ್‍ಗಳಾಗಲಿ ಎಂಬುದು ಜನರ ಕೂಗಾಗಿದೆ.
ಬರಿ ವಿಜಯನಗರ ಒಂದರಲ್ಲಿಯೇ ಕೋಟಿಗಟ್ಟಲೇ ಬಾಕಿ ಉಳಿಸಿಕೊಂಡಿರುವ ಸರ್ಕಾರ ರಾಜ್ಯವ್ಯಾಪಿ ಎಷ್ಷು ಬಾಕಿ ಉಳಿಸಿಕೊಂಡಿವೆಯೋ ತಿಳಿಯದಾಗಿದ್ದು ಇದನ್ನು ಪರಿಹರಿಸಬೇಕು ಸದ್ಯದ ಖರ್ಚುವೆಚ್ಚಕ್ಕೆ ಸರಿಯಾಗುವಂತೆ ದರ ನಿಗದಿಯಾಗಬೇಕು ಮುಂದುವರೆಯಬೇಕು ಎನ್ನುವುದಾದರೆ ತಗಲುವ ಹೊರೆ ಹೇಗೆ ಬರಿಸುತ್ತೇ ಎನ್ನುವುದೆ ಇದೀಗ ಸರ್ಕಾರದ ಮುಂದಿನ ಪ್ರಶ್ನೆಯಾಗಿದ್ದ ಬಿಟ್ಟಿ ಗ್ಯಾರಂಟಿಗಳು ಸರ್ಕಾರವನ್ನು ಯಾವಹಂತಕ್ಕೆ ಕೊಂಡೈಯುತ್ತೋ ಕಾದನೋಡಬೇಕಾಗಿದೆ.
ಹೊಸಪೇಟೆಯಲ್ಲಿ ಮೂರು ಇಂದಿರಾ ಕ್ಯಾಂಟಿನ್‍ಗಳಿವೆ. ಅದರಲ್ಲೂ ನಗರದ ತಾಯಿ ಮಕ್ಕಳ ಆಸ್ಪತ್ರೆ (ಎಂಸಿಎಚ್) ಎದುರು, ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆ ಆವರಣ, ಎಪಿಎಂಸಿ ಆವರಣದಲ್ಲಿ ಈ ಕ್ಯಾಂಟಿನ್‍ಗಳಿವೆ ಬೆಳಗ್ಗೆ 7:30ರಿಂದ 10 ಗಂಟೆವರೆಗೆ ಉಪಾಹಾರ ವಿತರಣೆ ಮಾಡಲಾಗುತ್ತಿದೆ. ಇನ್ನೂ ಮಧ್ಯಾಹ್ನ 12:30ರಿಂದ 3 ಗಂಟೆ ವರೆಗೆ ಊಟ ಮತ್ತು ರಾತ್ರಿ 7:30 ರಿಂದ 9 ಗಂಟೆಯವರೆಗೆ ಊಟ ದೊರೆಯುತ್ತದೆ. ಕ್ಯಾಂಟಿನ್‍ಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕೂಡ ಇದೆ. ಬಡವರು, ವೃದ್ಧರು ಕೂಡ ಈ ಕ್ಯಾಂಟಿನ್‍ಗಳನ್ನೇ ಅವಲಂಬಿಸಿದ್ದಾರೆ.
ಈ ಇಂದಿರಾ ಕ್ಯಾಂಟಿನ್‍ಗಳಿಗೆ 2018ರಿಂದ 2020ರ ವರೆಗೆ ಸರ್ಕಾರ ಬಿಲ್ ನೀಡಿದೆ. ಕಾರ್ಮಿಕ ಇಲಾಖೆ ಮತ್ತು ಸರ್ಕಾರದಿಂದ ಅನುದಾನ ಬರುತ್ತದೆ. ಹೊಸಪೇಟೆಯ ಮೂರು ಕ್ಯಾಂಟಿನ್‍ಗಳು ನಗರಸಭೆ ವ್ಯಾಪ್ತಿಗೆ ಬರುತ್ತವೆ.

ಸರ್ಕಾರದ ನಿರ್ದೇಶನದಂತೆ ಇಂದಿರಾ ಕ್ಯಾಂಟಿನ್‍ಗಳನ್ನು ನಾವು ಬಲಪಡಿಸುತ್ತೇವೆ. ಸ್ವಚ್ಛತೆ ಹಾಗು ಆಹಾರ ಗುಣಮಟ್ಟವನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟಿನ್‍ಗೆ ಆದ್ಯತೆ ನೀಡಿ ಹಸಿದವರಿಗೆ ಅನ್ನ ನೀಡಲು ಮುಂದಾಗುವ ಸರ್ಕಾರದ ಆಸೆಯಕ್ಕೆ ಸ್ಪಂಧಿಸಲಾಗುವುದು. ಗುತ್ತಿಗೆದಾರರಿಗೆ ಬಾಕಿ ನೀಡಬೇಕಾಗಿದೆ, ಸರ್ಕಾರ ಮತ್ತುಹಿರಿಯ ಅಧಿಕಾರಿಗಳೊಂದಿಗೆ ಚೆರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ಚಂದ್ರಶೇಖರ
ಯೋಜನಾ ನಿರ್ದೇಶಕರು
ಡಿಯುಡಿಸಿ ವಿಜಯನಗರ ಹೊಸಪೇಟೆ. 

ಕೂಲಿನಾಲಿ ಮಾಡು ಜೀವನ ನಡೆಸುತ್ತೇನೆ, ಒಂದ ದಿನ ಕೆಲಸ ಇದ್ದರೆ ಮತ್ತೊಂದಿನ ಇರಲ್ಲಾ, ಇಂದಿರಾ ಕ್ಯಾಂಟಿನ್ ಆರಂಭವಾದರೆ ಹಸಿವಿನಿಂದ ನರಳುವುದು ತಪ್ಪುತ್ತೆ. ನಮ್ಮ ಜೀವನಕ್ಕೆ ಈ ಕ್ಯಾಂಟಿನ್ ಆಸರೆಯಾಗಲಿವೆ.
ಮಂಜುಳಾ ದಿನಗೂಲಿ ನೌಕರಳು.