ವಿಜಯನಗರ ಜಿಲ್ಲೆಗೆ ಕೂಡ್ಲಿಗಿ ಸೇರಿಸದಿದ್ದರೆ ಹೋರಾಟ – ಬೊಮ್ಮಣ್ಣ

ಕೂಡ್ಲಿಗಿ.ನ.20:- ನೂತನ ವಿಜಯನಗರ ಜಿಲ್ಲೆ ರಚನೆಗೆ ರಾಜ್ಯ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದ್ದು ಈ ನೂತನ ಜಿಲ್ಲೆ ಪಟ್ಟಿಯಲ್ಲಿ ಹಿಂದುಳಿದ ತಾಲೂಕು ಕೂಡ್ಲಿಗಿ ಸೇರ್ಪಡೆಯಾಗಿರದಿದ್ದಲ್ಲಿ ಮುಂದಿನ ಜನರ ಆಕ್ರೋಶದ ಹೋರಾಟದಲ್ಲಿ ಮುಂದಾಗುವ ಅನಾವುತಕ್ಕೆ ಈಗಿನ ಸರ್ಕಾರ ಹಾಗೂ ಕ್ಷೇತ್ರದ ಶಾಸಕರೇ ಮುಖ್ಯ ಹೊಣೆಗಾರರಾಗುತ್ತಾರೆಂದು ಕೂಡ್ಲಿಗಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಜೆಡಿಎಸ್ ಬಳ್ಳಾರಿ ಜಿಲ್ಲಾಧ್ಯಕ್ಷ ಎನ್. ಟಿ. ಬೊಮ್ಮಣ್ಣ ತಿಳಿಸಿದರು.
ಅವರು ಇಂದು ಸಂಜೆವಾಣಿ ಪ್ರತಿನಿಧಿಯೊಂದಿಗೆ ಮಾತನಾಡಿ ಹೊಸ ಜಿಲ್ಲೆ ರಚನೆ ಕೇವಲ ರಾಜಕೀಯ ಪ್ರೇರಿತವಾಗಿರದೆ ಜನರ ಹಿತಕಾಪಾಡುವಲ್ಲಿ ಮುಂದಾಗಿರಬೇಕು ಅಲ್ಲದೆ ಹಿಂದುಳಿದ ಕೂಡ್ಲಿಗಿ ತಾಲೂಕು ನೂತನ ವಿಜಯನಗರ ಜಿಲ್ಲೆಗೆ ಕೇವಲ 47 ಕಿ. ಮೀ ಇದ್ದು ಬಳ್ಳಾರಿಗೆ ಹೋಗಲು ಇಲ್ಲಿನ ಜನತೆ 80 ಕಿ. ಮೀ. ಕ್ರಮಿಸಬೇಕಾಗಿದೆ ಆರ್ಥಿಕವಾಗಿ ಹಿಂದುಳಿದ ತಾಲೂಕಿನ ಬಡ ಜನತೆ ವಿಜಯನಗರ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರಲು ಹಾಗೂ ವ್ಯಾಪಾರ ವಹಿವಾಟಿಗೂ ಹೊಸಪೇಟೆ ಹತ್ತಿರವಾಗುತ್ತಿದ್ದು ರಾಷ್ಟ್ರೀಯ ಹೆದ್ದಾರಿ-50 ಇರುವುದರಿಂದ ಸಂಚಾರ ವ್ಯವಸ್ಥೆಗೂ ಅನುಕೂಲವಿದೆ ಆದರೆ ಬಳ್ಳಾರಿಯಿಂದ ಕೂಡ್ಲಿಗಿಗೆ ಬರಲು ಸಂಚಾರ ವ್ಯವಸ್ಥೆ ಸರಿಯಿಲ್ಲದೆ ಜನರು ಪರದಾಡಬೇಕಾಗುತ್ತದೆ ನಿಜವಾಗಲೂ ಜನಪರ ಕಾಳಜಿ ಇರುವ ಸರ್ಕಾರವಾಗಿದ್ದರೆ ಹಿಂದುಳಿದ ತಾಲೂಕಾದ ಕೂಡ್ಲಿಗಿಯನ್ನು ನೂತನ ವಿಜಯನಗರ ಜಿಲ್ಲಾ ಪಟ್ಟಿಯಲ್ಲಿ ಸೇರಿಸುತ್ತದೆ ಇಲ್ಲವಾದಲ್ಲಿ ಜನರ ಆಕ್ರೋಶಕ್ಕೆ ಗುರಿಯಾಗಿ ಹೋರಾಟದಲ್ಲಿ ಮುಂದಾಗುವ ಅನಾವುತಕ್ಕೆ ಮುಖ್ಯವಾಗಿ ಈಗಿನ ಸರ್ಕಾರ ಹಾಗೂ ಕ್ಷೇತ್ರದ ಶಾಸಕರೇ ಮುಖ್ಯ ಹೊಣೆಗಾರರಾಗುತ್ತಾರೆಂದು ಬೊಮ್ಮಣ್ಣ ತಿಳಿಸಿದರು.