ವಿಜಯನಗರ ಜಿಲ್ಲೆಗೆ ಅಗತ್ಯ ಅಧಿಕಾರಿಗಳ ನೇಮಕಕ್ಕೆ ಪ್ರಸ್ತಾವನೆ


ಸಂಜೆವಾಣಿ ವಾರ್ತೆ
ಹೊಸಪೇಟೆ, ಜು.02: ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಬಜೆಟ್ ಅಧಿವೇಶನದಲ್ಲಿ ಪೂರ್ಣಪ್ರಮಾಣದ ಅಧಿಕಾರಿಗಳು ಹುದ್ದೆಗಳನ್ನು ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹಜ್, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್.ಜಮೀರ್ ಅಹಮದ್ ಖಾನ್ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ಆಯೋಜಿಸಲಾದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಮಟ್ಟದಲ್ಲಿ ಹೆಚ್ಚುವರಿ ಕಾರ್ಯಭಾರ ಹೊಂದಿರುವ ಇಲಾಖೆಗಳಿಗೆ ಅನುಕೂಲವಾಗುವಂತೆ ಹುದ್ದೆ ಮಂಜೂರಾತಿ ಒದಗಿಸಲು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ ತ್ರೈಮಾಸಿಕ ಸಭೆ ಕೈಗೊಳ್ಳುವ ಬದಲಾಗಿ ತಾಲ್ಲೂಕುವಾರು ಸಭೆ ಕೈಗೊಂಡು ತಾಲ್ಲೂಕು ವ್ಯಾಪ್ತಿಯಲ್ಲಿ ಇರುವ ಸಮಸ್ಯೆಗಳ ಹಾಗೂ ಪ್ರಗತಿ ಪರಿಶೀಲನೆ ಕೈಗೊಳ್ಳುವ ಸಭೆ ನಡೆಸಲಾಗುತ್ತದೆ. ಬಜೆಟ್ ಅಧಿವೇಶನ ಪೂರ್ಣಗೊಂಡ ನಂತರ ಜು.24ರಿಂದ ವಿಜಯನಗರ ಜಿಲ್ಲೆಯ ವಿವಿಧ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕುಗಳಲ್ಲಿ ಶಾಸಕರ ಸಮ್ಮುಖದಲ್ಲಿ ಪ್ರಗತಿ ಪರಿಶೀಲನೆ ಕೈಗೊಳ್ಳಲಾಗುತ್ತಿದೆ ಎಂದರು.
ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿಸುವಲ್ಲಿ ಶ್ರಮ ವಹಿಸುತ್ತೇನೆ. ಅಧಿಕಾರಿಗಳು ನೀಡುವ ಸಹಕಾರದ ಜೊತೆಗೆ ಅಭಿವೃದ್ಧಿ ಜಿಲ್ಲೆಯಾಗಿಸಲಾಗುವುದು.
ಸಭೆಯಲ್ಲಿ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಮಾಹಿತಿ ಪಡೆದುಕೊಂಡರು
ನೀರಿನ ಸಮಸ್ಯೆ ಬಗೆಹರಿಸಲು ಕ್ರಮವಹಿಸಿ:
ಪ್ರತಿ ಕ್ಷೇತ್ರದಲ್ಲೂ ನೀರಿನ ಸಮಸ್ಯೆ ಬಗ್ಗೆ ದೂರುಗಳು ಶಾಸಕರಿಂದ ಬಂದಿದ್ದು, ಮೊಟ್ಟಮೊದಲಿಗೆ ನೀರಿನ ಸಮಸ್ಯೆ ನಿರ್ವಹಣೆಗೆ ಸಂಬಂಧಿಸಿದ ತ್ವರಿತ ಕ್ರಮ ವಹಿಸಬೇಕು. ಕೆಡಿಪಿ ಸಭೆಯಲ್ಲಿ ಎಲ್ಲಾ ತಾಲ್ಲೂಕುಗಳ ಅಧಿಕಾರಿಗಳು ನೀರಿನ ಸಮಸ್ಯೆ ಇರುವ ಕುರಿತು ವರದಿಯನ್ನು ಪ್ರಸ್ತುತ ಪಡಿಸಬೇಕು ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ, ಅನೈತಿಕ ಚಟುವಟಿಕೆಗಳ ಬಗ್ಗೆ ದೂರುಗಳು ಕೇಳಿ ಬರುತ್ತಿವೆ ಈ ಬಗ್ಗೆ ಇಲಾಖೆ ಮತ್ತಷ್ಟು ಬಂದೋಬಸ್ತ್ ಒದಗಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಕಚೇರಿ ಸ್ಥಾಪನೆಯಾಗದ ಇಲಾಖೆಗಳ ಮಾಹಿತಿ:
ನೂತನ ಜಿಲ್ಲೆಯಾದ ನಂತರ ಸೃಜನೆಯಾಗಿ ಕಚೇರಿ ಸ್ಥಾಪನೆಯಾಗದ ಇಲಾಖೆಗಳ ವಿವಿರಗಳನ್ನು ಪ್ರಭಾರ ಅಧಿಕಾರಿಗಳಿಂದ ಪಡೆದುಕೊಂಡರು. ಜಿಲ್ಲಾ ಮಟ್ಟದ 19 ಇಲಾಖೆಗಳಿಗೆ ಕಚೇರಿ ವ್ಯವಸ್ಥೆ ಇಲ್ಲ ಎಂಬ ಮಾಹಿತಿ ಪಡೆದು ತಾತ್ಕಾಲಿಕವಾಗಿ ಲೋಕೋಪಯೋಗಿ ಇಲಾಖೆಯ ಪರಿವೀಕ್ಷಣಾ ಮಂದಿರದಲ್ಲಿ ಹಾಗೂ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಸಹ ಕಚೇರಿ ಕಾರ್ಯ ನಿರ್ವಹಿಸಲು ತಿಳಿಸಿದರು.
ಇಲಾಖೆಯಿಂದ ಪ್ರತಿ ತಿಂಗಳು ಜನತಾ ದರ್ಶನ:
ಹಜ್, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಆಗಸ್ಟ್ ತಿಂಗಳಿನಿಂದ ಪ್ರತಿ ಜಿಲ್ಲೆಯಲ್ಲಿ ಪ್ರತಿ ತಿಂಗಳು ಜನತಾ ದರ್ಶನ ಹಮ್ಮಿಕೊಂಡು ಇಲಾಖೆಯಿಂದ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಶಾಸಕರಾದ ಹೆಚ್.ಆರ್.ಗವಿಯಪ್ಪ, ಎಂ.ಪಿ.ಲತಾ ಮಲ್ಲಿಕಾರ್ಜುನ, ಡಾ.ಎನ್.ಟಿ.ಶ್ರೀನಿವಾಸ್, ಕೃಷ್ಣನಾಯ್ಕ ಸೇರಿದಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನ್ ರಾಜ್, ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ., ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್
ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.