ವಿಜಯನಗರ ಜಿಲ್ಲಾ ರಚನೆಗೆ ಬೆಂಬಲಿಸಿ ಪತ್ರ ಚಳುವಳಿ

ಮರಿಯಮ್ಮನಹಳ್ಳಿ, ಡಿ.26: ಹೊಸಪೇಟೆ ವಿಜಯನಗರ ಜಿಲ್ಲಾ ಹೋರಾಟ ಸಮಿತಿಯವರು ನೂತನ ವಿಜಯನಗರ ಜಿಲ್ಲೆಯ ರಚನೆಗೆ ಬೆಂಬಲಿಸಿ ಪತ್ರ ಚಳುವಳಿಯನ್ನು ಶನಿವಾರದಂದು ಮರಿಯಮ್ಮನಹಳ್ಳಿಯ ಶ್ರೀ ಗುರುಪಾದ ದೇವರ ಮಠದಿಂದ ಆರಂಭಿಸಿದರು.
ಹೊಸಪೇಟೆಯಿಂದ ಹೊರಟ ಜಿಲ್ಲಾ ಹೋರಾಟ ಸಮಿತಿಯವರು ಮರಿಯಮ್ಮನಹಳ್ಳಿಯ ಕೆ.ಬಿ ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ ಮಠದಲ್ಲಿ ಸ್ವಾಮಿಗಳ ಕೃಪಾಶೀರ್ವಾದ ಪಡೆದು ನೂತನ ವಿಜಯ ನಗರ ಜಿಲ್ಲೆಗೆ ಪತ್ರ ಚಳುವಳಿಯನ್ನು ಆರಂಭಿಸಿದರು. ನಂತರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ನೂತನ ವಿಜಯನಗರ ಜಿಲ್ಲೆಯನ್ನು ರಚಿಸಿ ಕಲ್ಯಾಣ ಕರ್ನಾಟಕದ ಭಾಗವಾದ ಹೊಸಪೇಟೆಯನ್ನು ಜಿಲ್ಲಾ ಕೇಂದ್ರವನ್ನಾಗಿರಿಸಕೊಂಡು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಅನುವು ಮಾಡುವಂತೆ ಆಗ್ರಹಿಸಿದರು.
ಮರಿಯಮ್ಮನಹಳ್ಳಿಯ ನಂತರ ಸಮಿತಿಯವರು ಹ.ಬೊ.ಹಳ್ಳಿ, ನಂದಿಪುರ, ಹಡಗಲಿ, ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿ ತಾಲೂಕಗಳಿಗೆ ಭೇಟಿ ಮಾಡಿ ಪತ್ರ ಸಂಗ್ರಹ ಚಳುವಳಿಯನ್ನು ಆರಂಭಿಸಿದರು.
ವಿಜಯನಗರ ಜಿಲ್ಲಾ ಹೋರಾಟ ಸಮಿತಿಯವರು ತಮ್ಮ ಮನವಿಯಲ್ಲಿ ನೂತನ ಜಿಲ್ಲಾ ವ್ಯಾಪ್ತಿಯ ಎಲ್ಲಾ ತಾಲೂಕಿನ ಸಮಸ್ತ ಜನತೆಯು ಸುಮಾರು ಎರಡು ದಶಕಗಳ ಹೋರಾಟದ ಫಲವಾಗಿ ಹೊಸಪೇಟೆ ಕೇಂದ್ರ ಸ್ಥಾನವನ್ನಾಗಿಕೊಂಡು ವಿಜಯನಗರ ಸಾಮ್ರಾಜ್ಯದ ಗತವೈಭವದ ಸವಿನೆನಪಿನ ನೂತನ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬರುತ್ತಿರುವುದು ಪ್ರಶಂಸನೀಯ. ಇದಕ್ಕೆ ಹಲವಾರು ಸಂಘ ಸಂಸ್ಥೆಗಳ ಹಾಗೂ ಜಿಲ್ಲಾ ಹೋರಾಟ ಸಮಿತಿಯ ಹೋರಾಟಗಾರರ ಮನವಿಯ ಮೇರೆಗೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್‌ರು 31ನೇ ನೂತನ ವಿಜಯನಗರ ಜಿಲ್ಲೆಯನ್ನಾಗಿ ಮುಖ್ಯ ಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಅನುಮೋದಿಸಿರುವುದು ಸ್ವಾಗತಾರ್ಹವಾಗಿದೆ ಎಂದರು. ಅಲ್ಲದೇ ನೂತನ ಜಿಲ್ಲೆಯ ರಚನೆಯಿಂದ ವಿಜಯನಗರ ಜಿಲ್ಲೆಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ, ಆರೋಗ್ಯ, ಪ್ರವಾಸೋದ್ಯಮ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಸಹಾಯಕವಾಗುತ್ತದೆ. ಈ ನಮ್ಮ ಹೋರಾಟದಲ್ಲಿ ಈ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ಕೊಟ್ಟು ಕಲ್ಯಾಣ ಕರ್ನಾಟಕದ ಭಾಗವಾಗಿರುವ ನೂತನ ವಿಜಯನಗರ ಜಿಲ್ಲೆ ಮುಖಾಂತರ ಈ ಭಾಗದ ಜನತೆಯ ಸರ್ವತೋಮುಖ ಪ್ರಗತಿಗೆ ಕಾರಣವಾಗುತ್ತದೆ. ಆದುದರಿಂದ ಸರ್ಕಾರವು ಹೊಸಪೇಟೆ ಕೇಂದ್ರ ಸ್ಥಾನದ ನೂತನ ವಿಜಯನಗರ ಜಿಲ್ಲೆಯನ್ನು ರಚನೆ ಮಾಡಿ ಕರ್ನಾಟಕ ರಾಜ್ಯ ಪತ್ರದಲ್ಲಿ ಅಂತಿಮ ಅಧಿಸೂಚನೆ ಹೊರಡಿಸಬೇಕೆಂದು ವಿಜಯನಗರ ಜಿಲ್ಲಾ ಹೋರಾಟ ಸಮಿತಿಯವರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ತಾರಿಹಳ್ಳಿ ಹನುಮಂತಪ್ಪ, ಕೆ.ರಾಮಪ್ಪ ರಾಮಪ್ಪ, ಪಿ.ವಿ.ವೆಂಕಟೇಶ್, ಗುಜ್ಜಲ ಗಣೇಶ, ನಿಂಬಗಲ್ ರಾಮಕೃಷ್ಣ, ರೇವಣ ಸಿದ್ದಪ್ಪ, ಬಿ.ಟಿ. ಮಂಜುನಾಥ, ವಿನಾಯಕ ಶೆಟ್ಟರ್ , ಎಂ.ಸುರೇಶ್, ಕೊಟ್ರೇಶ್, ಬುಡೇನ್ ಸಾಬ್, ಖಲಂದರ, ಇಸೂಬ್, ದಾದ ಖಲಂದರ್ , ಮಹಮ್ಮದ ಗೌಸ್, ಬಿ.ಮಂಜುನಾಥ್, ದುರುಗಪ್ಪ, ಪಿ.ಶ್ರೀನಿವಾಸ ಮೂರ್ತಿ, ಎಲ್. ರಮೇಶ್, ಅನಿಲ್ ಗುಲಾಬ್ ರಾವ್ ಸಿಂದೆ, ಅಂಬರೇಶ್, ಬಿ.ರಮೇಶ್, ಷಣ್ಮುಖ, ಎನ್.ಶ್ರೀನಿವಾಸ, ಡಿ. ಪ್ರಕಾಶ, ಬ್ಯಾಲಕುಂದಿ ರಮೇಶ್, ಸುಬ್ಬರಾವ್, ಸಮೀರ್, ಜಾಫರ್ ಹಾಗೂ ಇತರರು ಇದ್ದರು.