ವಿಜಯನಗರ ಜಿಲ್ಲಾ ಉಸ್ತುವಾರಿ ಪಡೆಯುವಲ್ಲಿ ಸಿಂಗ್ ಯಶಸ್ವಿ

ಬೆಂಗಳೂರು, ಜು. ೩೦- ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್ ಅವರು ಕೊನೆಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಪಡೆಯುವಲ್ಲಿ ಸಫಲರಾಗಿದ್ದಾರೆ.
ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್ ಅವರಿಗೆ ವಿಜನಯಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ.
ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಶಿಕಲಾ ಜೊಲ್ಲೆ ಅವರಿಗೆ ಆನಂದ್‌ಸಿಂಗ್ ನಿರ್ವಹಿಸುತ್ತಿದ್ದ ಕೊಪ್ಪಳ ಜಿಲ್ಲೆಯ ಉಸ್ತುವಾರಿಯನ್ನು ವಹಿಸಲಾಗಿದೆ.
ಈ ಎರಡೂ ಜಿಲ್ಲೆಗಳ ಉಸ್ತವಾರಿ ಸಚಿವರ ಬದಲಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಜನವರಿ ೨೪ ರಂದು ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕ ಮಾಡಿದ ಸಂದರ್ಭದಲ್ಲಿ ಆನಂದ್‌ಸಿಂಗ್ ರವರಿಗೆ ಕೊಪ್ಪಳ ಮತ್ತು ಶಶಿಕಲಾ ಜೊಲ್ಲೆ ಅವರಿಗೆ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು.
ಆಯಾ ಜಿಲ್ಲೆಗೆ ಸೇರಿದವರನ್ನು ಆಯಾ ಜಿಲ್ಲಾ ಸಚಿವರನ್ನಾಗಿ ನೇಮಕ ಮಾಡಿದರೆ ಗುಂಪುಗಾರಿಕೆಗೆ ಅವಕಾಶ ಮಾಡಿಕೊಡಬಹುದು ಎಂಬ ಲೆಕ್ಕಾಚಾರದಲ್ಲಿ ತವರು ಜಿಲ್ಲೆಗೆ ಸಚಿವರನ್ನು ಉಸ್ತುವಾರಿಯನ್ನಾಗಿ ಮಾಡದೆ ಬೇರೆ ಜಿಲ್ಲೆಗೆ ಉಸ್ತುವರಿಯನ್ನಾಗಿ ನೇಮಿಸಲಾಗಿತ್ತು.
ಆದರೆ ಆನಂದ್‌ಸಿಂಗ್ ಅವರು ವಿಜಯನಗರ ಹೊಸ ಜಿಲ್ಲೆಯಾಗಿದೆ. ಜಿಲ್ಲೆಯನ್ನು ಕಟ್ಟಲು ತಮಗೆ ವಿಜಯನಗರ ಜಿಲ್ಲೆಯ ಉಸ್ತುವಾರಿ ನೀಡುವಂತೆ ಕೆಲ ತಿಂಗಳುಗಳಿಂದ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತಲೇ ಬಂದಿದ್ದರೂ ಕೊನೆಗೂ ಅವರ ಮಾತಿಗೆ ಮನ್ನಣೆ ಸಿಕ್ಕಿದಂತಾಗಿದೆ.
ಬೇರೆ ಬೇರೆ ಜಿಲ್ಲೆಗಳ ಉಸ್ತುವಾರಿ ಸಚಿವರುಗಳಾಗಿ ನೇಮಕೊಂಡಿರುವವರು ಸಹ ತಮಗೆ ತವರು ಜಿಲ್ಲೆಯನ್ನು ನೀಡಿ ಚುನಾವಣಾ ಸಂದರ್ಭದಲ್ಲಿ ತವರು ಜಿಲ್ಲೆಯ ಉಸ್ತುವಾರಿಯಾಗಿದ್ದರೆ ಕ್ಷೇತ್ರದ ಕಡೆ ಹೆಚ್ಚ ಗಮನ ಹರಿಸಲು ಸಾಧ್ಯ ಎಂಬ ಬೇಡಿಕೆಯನ್ನು ಮುಖ್ಯಂಮತ್ರಿಗಳ ಮುಂದೆ ಇಟ್ಟಿದ್ದಾರೆ. ಈ ಬೇಡಿಕೆಗೆ ಇನ್ನೂ ಮುಖ್ಯಮಂತ್ರಿಗಳು ಯಾವುದೇ ತೀರ್ಮಾನ ಕೈಗೊಂಡಿಲ್ಲ.
ಆನಂದ್‌ಸಿಂಗ್ ಅವರಿಗೆ ತವರು ಜಿಲ್ಲೆ ಉಸ್ತುವಾರಿ ಸಿಕ್ಕಂತೆ ಇನ್ನೂ ಕೆಲ ಸಚಿವರುಗಳಿಗೆ ತವರು ಜಿಲ್ಲೆಯ ಉಸ್ತುವಾರಿ ಸಿಗುವ ಸಾಧ್ಯತೆಗಳು ಹೆಚ್ಚಿವೆ.