ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ12: ವಿಜಯನಗರ ಜಿಲ್ಲೆಯ ಮಹಿಳೆಯರು ಉಚಿತ ಬಸ್ ಪ್ರಯಾಣವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ನಗರದ ಕೇಂದ್ರೀಯಬ ಬಸ್ ನಿಲ್ದಾಣದಲ್ಲಿ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಕೆಲಸ, ಕಾರ್ಯಗಳಿದ್ದರೆ ಮಾತ್ರ ಉಚಿತ ಬಸ್ ಪ್ರಯಾಣ ಮಾಡಬೇಕು ಹೊರತು ಬೇಕಾಬಿಟ್ಟಿ ಪ್ರಯಾಣ ಮಾಡಿ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಬೇಡಿ ಎಂದು ಸಲಹೆ ನೀಡಿದರು.
ಬೆಲೆ ಏರಿಕೆಯಿಂದ ರಾಜ್ಯದಲ್ಲಿ ಬಡವರು ಜೀವನ ಮಾಡುವುದು ಕಷ್ಟ ಆಗಿತ್ತು. ಚುನಾವಣೆ ಸಂದರ್ಭದಲ್ಲಿ ಈ ಬೆಲೆ ಏರಿಕೆಯಲ್ಲಿ ಸಿಲೆಂಡರ್ ಬೆಲೆ ಕಡಿಮೆ ಮಾಡಿದರೆ, ಸಾಕು ಎಂದುಕೊಂಡಿದೆ. ಆದರೆ, ಪಕ್ಷದ ಹಿರಿಯರು 10 ಕೆಜಿ ಅಕ್ಕಿ, 200 ಯುನಿಟ್ ವಿದ್ಯುತ್, ಮಹಿಳೆಯರಿಗೆ 2 ಸಾವಿರ, ಬಸ್ ಪ್ರಯಾಣ ಸೇರಿ ಇತರೆ ಉಚಿತ ಎನ್ನುವ ಯೋಜನೆಗಳನ್ನು ಭರವಸೆ ನೀಡಿದರು. ಚುನಾವಣೆ ಮುನ್ನ ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳು ಜನರ ಮನೆ ಬಾಗಲಿಗೆ ತಲುಪಲಿವೆ ಇವುಗಳ ಲಾಭವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ರಾಜ್ಯದ ಯಾವ ಕಡೆಯಾದರೂ ಬಸ್‍ನಲ್ಲಿ ಉಚಿತವಾಗಿ ಮಹಿಳೆಯರು ಹೋಗಬಹುದು. ನಿಮ್ಮ ಊರಿನಿಂದ ನೀವು ದುಡಿಯ ಸ್ಥಳಕ್ಕೆ ಹೋಗಬೇಕು ಎಂದರೆ ಹಣ ಇಲ್ಲದಿದ್ದರೂ ಪರವಾಗಿಲ್ಲ, ಪ್ರಯಾಣ ಮಾಡಬಹುದು. ಮಹಿಳೆಯರ ಸಬಲಿಕರಣಕ್ಕಾಗಿ ಸರಕಾರದ ಈ ಮಹತ್ವದ ಯೋಜನೆ ಜಾರಿ ಮಾಡಲಾಗಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಿ ಅನವಶ್ಯಕವಾಗಿ ಬಸ್‍ಗಳಲ್ಲಿ ಪ್ರಯಾಣ ಮಾಡಿ ಸರ್ಕಾರದ ಬೊಕ್ಕಸಕ್ಕೆ ಹಾನಿಯುಂಟು ಮಾಡಬೇಡಿ ಎಂದರು.
ವಿಭಾಗಿಯ ನಿಯಂತ್ರಣಾಧಿಕಾರಿ ಜೆ.ಮೊಹ್ಮದ್ ಫೈಜ್ ಪ್ರಸ್ತಾವಿಕ ಮಾತನಾಡಿ, ನಮ್ಮ ವಿಭಾಗಿಯ ವ್ಯಾಪ್ತಿಯ 5 ಘಟಕಗಳಲ್ಲಿ 21 ಬಸ್‍ನಿಲ್ದಾಣಗಳು, 424 ವಾಹನಗಳಿವೆ. ದಿನದ ಆದಾಯ ಸರಾಸರಿ 50 ಲಕ್ಷ ರೂ. ಇದೆ. 398 ಚಾಲಕರಿದ್ದು, 110 ನಿರ್ವಾಹಕರಿದ್ದಾರೆ. 497 ಚಾಲಕ ಕಂ ನಿರ್ವಹಕರಿದ್ದಾರೆ. 1005 ಸಿಬ್ಬಂಧಿಗಳಿದ್ದು, 214 ತಾಂತ್ರಿಕಾ ಸಿಬ್ಬಂಧಿ, 245 ಆಡಳಿತ ಸಿಬ್ಬಂದಿಗಳಿದ್ದಾರೆ. 40416 ವಿದ್ಯಾರ್ಥಿ ಪಾಸ್‍ಗಳಿವೆ. ಸರಕಾರ ನೀಡುವ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ನೀಡಿ ಮಹಿಳೆಯರು ಪ್ರಯಾಣ ಬೆಳೆಸಬಹುದು ಎಂದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ, ಸಿಇಒ ಸದಾಶಿವ ಪ್ರಭು, ಎಸ್ಪಿ ಶ್ರೀಹರಿಬಾಬು, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ತಸಹಸೀಲ್ದಾರ್ ವಿಶ್ವಜಿತ್ ಮಹೇತ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಣಿ ಸಂಯುಕ್ತ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿರಾಜ್ ಶೇಕ್, ಮುಖಂಡರಾದ ಎಚ್.ಎನ್ ಮೊಹಮ್ಮದ್ ಇಮಾಮ್ ನಿಯಾಜಿ, ಗುಜ್ಜಲ್ ನಾಗರಾಜ್, ಕೆ.ಮಹೇಶ್ ರಾಮಚಂದ್ರಗೌಡ ಪಾಲ್ಗೊಂಡಿದ್ದರು.
ಬಳ್ಳಾರಿಯಲ್ಲಿ ವಿಜಯನಗರ ಸೇರ್ಪಡೆಗೆ ಬಿಡುವುದಿಲ್ಲ:
ವಿಜಯನಗರ ಜಿಲ್ಲೆಯನ್ನು ಬಳ್ಳಾರಿಗೆ ಸೇರ್ಪಡೆಗೆ ಬಿಡುವುದಿಲ್ಲ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ವಿಜಯನಗರ ಜಿಲ್ಲೆ ಬಳ್ಳಾರಿ ಸೇರ್ಪಡೆ ಕುರಿತು ಸಚಿವ ನಾಗೇಂದ್ರ ಅವರ ಹೇಳಿಕೆ ಪ್ರತಿಕ್ರಿಯಿಸಿದ ಅವರು, ವಿಜಯನಗರ, ವಿಜಯನಗರ ಜಿಲ್ಲೆಯಾಗಿ ಉಳಿಯಲಿ, ಬಳ್ಳಾರಿ, ಬಳ್ಳಾರಿ ಜಿಲ್ಲೆಯಾಗಿ ಉಳಿಯಲಿ, ಈಗಾಗಲೇ ಅಧಿಕೃತವಾಗಿ ವಿಜಯನಗರ ಜಿಲ್ಲೆಯಾಗಿದೆ. ನಾಗೇಂದ್ರ ಒಳ್ಳೆಯ ಸ್ನೇಹಿತರಾಗಿದ್ದಾರೆ. ಅವರಿಗೆ ಮನವರಿಕೆ ಮಾಡಿಕೊಡುವೆ ಎಂದರು.