ವಿಜಯನಗರ ಕಾಲದ ಶಾಸನ-ವೀರಗಲ್ಲು ಪತ್ತೆ


ಸಂಜೆವಾಣಿ ವಾರ್ತೆ
ಹೊಸಪೇಟೆ, ಮಾ.11: ತಾಲ್ಲೂಕಿನ ನಾಗೇನಹಳ್ಳಿಯ ಧರ್ಮದಗುಡ್ಡದ ಬಳಿಯ ಹೊಲಯೊಂದರ ಪುರಾತನ ದೇವಾಲಯದ ಕಂಬಯೊಂದಕ್ಕೆ ವಿಜಯನಗರ ಅರಸರ ಕಾಲದ ಅಪ್ರಕಟಿತ ಶಾಸನ ಪತ್ತೆಯಾದರೆ, ಬಸವದುರ್ಗ ಗ್ರಾಮದ ಹೊಲದಲ್ಲಿ ಎರಡು ವೀರಗಲ್ಲುಗಳು ಪತ್ತೆಯಾಗಿವೆ. 
ಡಾ. ಚನ್ನಪ್ಪ, ಅಧ್ಯಾಪಕ ಪ್ರಭು ಹಾಗೂ ವಕೀಲರಾದ ಷಣ್ಮುಖ ಅವರ ಸಹಯೋಗದಲ್ಲಿ ವಿಜಯನಗರ ತಿರುಗಾಟ ಸಂಶೋಧನಾ ತಂಡದ ಸದಸ್ಯರಾದ ಡಾ. ಗೋವರ್ಧನ, ಡಾ. ಗೋವಿಂದ ಡಾ. ಕೃಷ್ಣೆಗೌಡ ಡಾ. ರಾಮಾಂಜಿನೇಯ, ಸಂಶೋಧಕ ರವಿಕುಮಾರ ಅವರ ನೇತೃತ್ವದ ತಂಡ ಇವುಗಳನ್ನು ಪತ್ತೆ ಹಚ್ಚಿದೆ.
ಅಪರೂಪದ ಶಾಸನ:
ನಾಗೇನಹಳ್ಳಿ ಗ್ರಾಮದ ಹೊಲದಲ್ಲಿರುವ ಪುರಾತನ ದೇವಾಲಯದ ಕಂಬದಲ್ಲಿ ಅಪ್ರಕಟಿತ ಶಾಸನವನ್ನು ಪತ್ತೆಯಾಗಿದೆ. ಮೂರು ಸಾಲಿನಲ್ಲಿರುವ ಕನ್ನಡ ಶಾಸನವಾಗಿದೆ. ಈ ಅಕ್ಷರಗಳು, ವಿಜಯನಗರ ಕಾಲದ ಲಿಪಿಯನ್ನು ಹೋಲುತ್ತಿದ್ದು, ಅಪೂರ್ಣ ಶಾಸನವಾಗಿದೆ. ಶಾಸನದ ಮೇಲ್ಬಾಗದಲ್ಲಿ ಸೂರ್ಯ, ಚಂದ್ರರನ್ನು ಕೆತ್ತಲಾಗಿದೆ. ವಿಜಯನಗರ ಕಾಲಾವಧಿಯಲ್ಲಿ ಈ ಪ್ರದೇಶವನ್ನು ‘ಶ್ರೀ ವಿರೂಪಾಕ್ಷ ದೇವರ ಪುರ’ ಎಂದು ಕರೆಯಲಾಗುತಿತ್ತು ಎಂಬುದು ಶಾಸನದಿಂದ ತಿಳಿದು ಬರುತ್ತದೆ. ಅಂತೆಯೇ ಸಂಗಮ, ಸಾಳಮ ವಂಶದ ಕಾಲಾವಧಿಯಲ್ಲಿ ಅದರಲ್ಲೂ ವಿರೂಪಾಕ್ಷ ದೇವಾಲದಲ್ಲಿ ‘ಶ್ರೀ ವಿರೂಪಾಕ್ಷ’ ಎಂಬ ಅಕ್ಷರ  ನಮೂದಿತವಾಗಿದೆ. ಅಲ್ಲದೇ ಹರಿಹರ ಕವಿಯು ಹಂಪಿಯನ್ನು ಆಳಿದವ ವಿರೂಪಾಕ್ಷ ಎಂದು ಕೃತಿಗಳಲ್ಲಿ ಉಲ್ಲೇಖಿಸಲಾಗಿದೆ ಇದರಿಂದ ಈ ದೇವಾಲಯವು ಸಂಗಮ ಇಲ್ಲವೇ ಸಾಳಮ ವಂಶದ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡಿರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ವೀರಗಲ್ಲು:
ಬಸವನದುರ್ಗ ಗ್ರಾಮದ ಹೊಲವೊಂದರಲ್ಲಿ ಅಪ್ರಕಟಿತ ಎರಡು ವೀರಗಲ್ಲುಗಳು ಪತ್ತೆಯಾಗಿದೆ. ಶಾಸನದಲ್ಲಿರುವ ಚಿತ್ರಗಳಲ್ಲಿ ಭೂಮಿಗಾಗಿ ನಡೆದ ಹೋರಾಟದಲ್ಲಿ ವೀರಮರಣ ಹೊಂದಿದ ರೈತರ ಸ್ಮರಣಾರ್ಥ ವೀರಗಲ್ಲನ್ನು ಕೆತ್ತನೆ ಮಾಡಿಬಹುದು ಎಂದು ತಂಡದ ಸದಸ್ಯರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಒಂದೊಂದು ವೀರಗಲ್ಲಿನಲ್ಲಿ ಮೂರು ಕಡೆಗಳಲ್ಲಿ ಪತ್ರೇಕ ಚಿತ್ರಗಳನ್ನು ಕೆತ್ತನೆ ಮಾಡಲಾಗಿದೆ. ಒಂದು ವೀರಗಲ್ಲಿನಲ್ಲಿ ರೈತ ನೇಗಿಲು ಹಿಡಿದಿರುವುದು, ವೀರರು ಗುರಾಣಿ ಹಿಡಿದಿರುವುದು, ಪದ್ಮಾಸನದಲ್ಲಿ ಕುಳಿತ ವೀರನ ಬಳಿ ದೇವಧೂತರು ನಿಂತಿರುವ ಚಿತ್ರವನ್ನು ಕೆತ್ತನೆ ಮಾಡಲಾಗಿದೆ.
ಮತ್ತೊಂದು ವೀರಗಲ್ಲಿನಲ್ಲಿ ಇಬ್ಬರು ವೀರರ ಕಾದಾಟ, ನೇಗಿಲು ಚಿಹ್ನೆಯ ಚಿತ್ರ. ಚಾಮರ ಬೀಸುವ ಸೇವಕರು ಮತ್ತು ವೀರನನ್ನು ಕರೆದೊಯ್ಯುವ ಚಿತ್ರವನ್ನು ಕೆತ್ತಲಾಗಿದೆ. ವಿಜಯನಗರ ಅರಸರ ಕಾಲಘಟ್ಟದಲ್ಲಿ ಶಾಸನ ಮತ್ತು ವೀರಗಲ್ಲುಗಳು ಕೆತ್ತನೆ ಮಾಡಿರಬಹುದು ಎಂದು ತಂಡದ ಸದಸ್ಯ ಡಾ. ಗೋವಿಂದ ಅಭಿಪ್ರಾಯ ಪಟ್ಟಿದ್ದಾರೆ.