ವಿಜಯನಗರ ಕಾಲದ ಮೂರು ವಿಗ್ರಹಗಳು ಲಂಡನ್‌ನಿಂದ ಭಾರತಕ್ಕೆ

ನವದೆಹಲಿ, ಸೆ.೧೬ : ತಮಿಳುನಾಡಿನ ನಾಗಪಟ್ಟಣ್ಣಂನ ವಿಷ್ಣು ದೇವಾಲಯದಲ್ಲಿ ಕಳವು ಮಾಡಲಾಗಿದ್ದ ವಿಜಯನಗರ ಕಾಲದ ಮೂರು ವಿಗ್ರಹಗಳನ್ನು ಲಂಡನ್‌ನ ವಸ್ತು ಸಂಗ್ರಹಾಲಯದಿಂದ ವಶಕ್ಕೆ ಪಡೆದು ಭಾರತಕ್ಕೆ ತರಲಾಗಿದೆ.
೧೯೭೮ರಲ್ಲಿ ನಾಗಪಟ್ಟಣಂನ ದೇವಾಲಯದಲ್ಲಿ ಕಳುವಾಗಿದ್ದ ವಿಜಯನಗರ ಕಾಲದ ವಿಗ್ರಹಗಳನ್ನು ಲಂಡನ್‌ನಲ್ಲಿ ಪತ್ತೆಹಚ್ಚಲಾಗಿತ್ತು. ಬಳಿಕ ಲಂಡನ್‌ನಲ್ಲಿರುವ ಭಾರತದ ರಾಯಭಾರಿ ಅವರು ಅಲ್ಲಿನ ಪೊಲೀಸರ ನೆರವಿನಿಂದ ಅದನ್ನು ವಶಕ್ಕೆ ಪಡೆದುಕೊಂಡಿದ್ದರು. ನಂತರ ಅದನ್ನು ತಮಿಳುನಾಡಿನಲ್ಲಿ ಮರುಸ್ಥಾಪಿಸಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ತಿಳಿಸಿದ್ದಾರೆ.
ವಿಗ್ರಹ ಮತ್ತೆ ಭಾರತಕ್ಕೆ ಪಡೆಯುವ ದಿಶೆಯಲ್ಲಿ ಶ್ರಮವಹಿಸಿದ ಲಂಡನ್‌ನಲ್ಲಿನ ರಾಯಭಾರಿ, ಭಾರತದ ಪ್ರಾಚ್ಯ ವಸ್ತು ಸಂಗ್ರಾಹಾಲಯ ಹಾಗೂ ತಮಿಳುನಾಡು ಸರ್ಕಾರವನ್ನು ಅವರು ಶ್ಲಾಘಿಸಿದ್ದಾರೆ.
ಲಂಡನ್‌ನಲ್ಲಿರುವ ಭಾರತದ ರಾಯಭಾರಿ ಅವರು ಮೂರು ಅಡಿ ಎತ್ತರದ ಕಂಚಿನ ಶ್ರೀರಾಮ, ಲಕ್ಷ್ಮಣ ಹಾಗೂ ಸೀತಾಮಾತೆಯ ವಿಜಯನಗರ ಕಾಲದ ವಿಗ್ರಹಗಳನ್ನು ತಮಿಳುನಾಡು ಸರ್ಕಾರದ ವಶಕ್ಕೆ ನೀಡಿದರು. ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಅಭಾರಿಯಾಗಿರುವುದಾಗಿ ಪಟೇಲ್ ತಾವು ಮಾಡಿರುವ ಟ್ವೀಟ್‌ನಲ್ಲಿ ಹೇಳಿದ್ದಾರೆ.