ವಿಜಯನಗರ ಕರ್ನಾಟಕ ೪ನೇ ಸಾಂಸ್ಕೃತಿಕ ಸಮ್ಮೇಳನ
ವಿಜಯನಗರದ ಇತಿಹಾಸ ಮತ್ತು ಸೇವೆ ಸ್ಮರಣೀಯ : ಡಾ. ಸತೀಶ ಹೊಸಮನಿ


ಸಂಜೆವಾಣಿ ವಾರ್ತೆ
ಹೊಸಪೇಟೆ, ಅ. ೧ : ಬಳ್ಳಾರಿಯಿಂದ ಈಚೆಗೆ ನೂತನ ಜಿಲ್ಲೆಯಾಗಿದ್ದರೂ ಸಹ ಐತಿಹಾಸಿಕ ಮತ್ತು ಪುರಾತನ ದೃಷ್ಟಿಯಿಂದ ಇದು ಶ್ರೇಷ್ಠವಾದ ಜಿಲ್ಲೆ ಎಂದರೆ ಅದು ವಿಜಯನಗರ ಮತ್ತು ಅದಕ್ಕೆ ಅಂತಹ ಹೆಸರನ್ನು ಮರಳಿ ದಾಖಲಿಸಿರುವದು ಸಹ ವಿಶೇಷ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ ಹೊಸಮನಿ ಹೇಳಿದರು.
ಅವರು ನಗರದ ಅಂಬೇಡ್ಕರ್ ಭವನದ ಬುದ್ಧ ಕಲ್ಚರಲ್ ಹಾಲ್ನಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಅಭಿವೃದ್ಧಿ ಟ್ರಸ್ಟ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆಸಿದ ಒಂದು ದಿನದ ವಿಜಯನಗರ ಕರ್ನಾಟಕ ೪ನೇ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು.
ಪ್ರತಿ ಕಾರ್ಯಕ್ರಮದಲ್ಲೂ ಗ್ರಂಥಾಲಯ ಮತ್ತು ವಿದ್ಯಾರ್ಜನೆ ಕುರಿತು ಮಾತನಾಡುವ ಮತ್ತು ಡಿಜಿಟಲ್ ಗ್ರಂಥಾಲಯಕ್ಕೆ ಸದಸ್ಯರನ್ನು ಮಾಡುವದನ್ನು ಇಲಾಖೆಯಿಂದ ರೂಢಿಸಿಕೊಂಡಿದ್ದು ಅದರಂತೆ ಇಲ್ಲಿಯೂ ಇರುವ ಎಲ್ಲರೂ ಸದಸ್ಯರಾಗಿ ಎಂದ ಅವರು ತಮ್ಮ ಸಿಬ್ಬಂದಿಯ ಸಹಕಾರದೊಂದಿಗೆ ಸದಸ್ಯರನ್ನು ಮಾಡಿಸಿದರು, ಈ ಕೆಲಸದ ಕಾರಣಕ್ಕೆ ಅಮೇರಿಕಾವನ್ನು ಹಿಂದಿಕ್ಕಿ ಕರ್ನಾಟಕ ಇ-ಗ್ರಂಥಾಲಯ ಅಂತರಾಷ್ಟ್ರೀಯ ಮಟ್ಟದಲ್ಲಿ ಮೊದಲ ಸ್ಥಾನದಲ್ಲಿ ಇದ್ದು ಅಂತರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದೆ ಎಂದರು.
ಇದೇ ವೇಳೆ ವಿಜಯನಗರ ಜಿಲ್ಲೆಯ ಇತಿಹಾಸ, ಶಿಕ್ಷಣ ಮತ್ತು ಪ್ರವಾಸೋಧ್ಯಮದ ಕೊಡುಗೆಯನ್ನು ಸ್ಮರಿಸಿದ ಅವರು ಕರ್ನಾಟಕದಲ್ಲಿಯೇ ಹಂಪಿ ಅತ್ಯಂತ ಹೆಚ್ಚಿನ ಜನರನ್ನು ತನ್ನತ್ತ ಸೆಳೆಯುವ ಮೂಲಕ ಇಲ್ಲಿನ ಜನರಿಗೆ ಉದ್ಯೋಗ ಮತ್ತು ಸರಕಾರಕ್ಕೆ ಆದಾಯ ತಂದಿರುವದಲ್ಲದೇ ನಮ್ಮ ಇತಿಹಾಸ ಮತ್ತು ಸಂಸ್ಕೃತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗುತ್ತಿರುವದು ದಾಖಲಾರ್ಹ ಮತ್ತು ಸ್ಮರಣೀಯ ಎಂದರು.
ಹರಪನಹಳ್ಳಿ, ಕೂಡ್ಲಗಿ, ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ ಮತ್ತು ಕೊಟ್ಟೂರುಗಳನ್ನು ಒಂದುಗೂಡಿಸಿಕೊಂಡಿರುವ ವಿಜಯನಗರ ಜಿಲ್ಲೆ ಎಲ್ಲ ರೀತಿಯಿಂದಲೂ ಸಮೃದ್ಧವಾಗಿದೆ. ಕಾರ್ಖಾನೆಗಳ ಮೂಲಕ ದೇಶಕ್ಕೆ ಉಕ್ಕನ್ನು, ಅದಿರಿನ ಮೂಲಕ ದೇಶಕ್ಕೆ ಸಂಪನ್ಮೂಲವನ್ನು ಹಾಗೇ ಜನರಿಗೆ ಬದುಕು ಮತ್ತು ಆದಾಯವನ್ನು ಕೊಟ್ಟಿರುವದನ್ನು ಗಮನಿಸಬಹುದು ಎಂದರು.
ಮರಿಯಮ್ಮನಹಳ್ಳಿಯ ರಂಗಭೂಮಿ ಕೊಡುಗೆಯನ್ನು ಸ್ಮರಿಸಿದ ಅವರು,
ಕೊಪ್ಪಳದ ಹಿರಿಯ ಸಾಹಿತಿ ಡಾ. ಮಹಾಂತೇಶ್ ಮಲ್ಲನಗೌಡರ್ ಮಾತನಾಡಿ ರೈತರಿಗೆ ನ್ಯಾಯ ಸಿಗಬೇಕು ಅದಕ್ಕೆ ಅವರು ಬೆಳೆದ ಬೆಳೆಗೆ ಅವರೇ ದರ ನಿಗದಿ ಮಾಡುವಂತಾಬೇಕು ಎಂದರು. ಅಕ್ಕಮಹಾದೇವಿ ಮಹಿಳಾ ವಿವಿಯ ಮಾಜ ಸಿಂಡಿಕೇಟ್ ಸದಸ್ಯೆ ಸಾವಿತ್ರಿ ಮುಜುಂದಾರ್ ಅವರು ಪ್ರವಾಸೋದ್ಯಮ, ಕನ್ನಡ ವಿವಿ ಹಂಪಿ ಉಪ ಗ್ರಂಥ ಪಾಲಕ ಡಾ. ಎಂ. ಸಿ. ಗುಡಿಮನಿ ಅವರು ಡಿಜಿಟಲ್ ಗ್ರಂಥಾಲಯ, ಕರ್ನಾಟಕ ರಾಜ್ಯ ರೈತ ಸಂಘ ಹೊಸಪೇಟೆ ತಾಲೂಕ ಅಧ್ಯಕ್ಷ ಗಂಟೆ ಸೋಮಶೇಖರ್ ಅವರು ನೀರಾವರಿ ಯೋಜನೆಯ ವಿಚಾರ ಗೋಷ್ಠಿಯಲ್ಲಿ ಮಾತನಾಡಿದರು. ಉಡುಪಿ ದೊಡ್ಡನಗುಡ್ಡೆಯ ಆದಿಶಕ್ತಿ ದುರ್ಗಾ ಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ರಮಾನಂದ ಗುರೂಜಿ ದಂಪತಿಗಳು ಸಾನಿಧ್ಯವಹಿಸಿದ್ದರು.
ಕಾರ್ಯಕ್ರಮದಲ್ಲಿ ಕು. ಸವಿತಾ ಘೋರ್ಪಡೆ ಬೀದರ್ ಅವರ ನೃತ್ಯಗಳು ಮತ್ತು ಗಾಯಕ ಫಕಿರಪ್ಪ ಗುಳದಳ್ಳಿ ಅವರ ಕೆರೋಕೆ ಸಂಗೀತ ಕಾರ್ಯಕ್ರಮ ವಿಶೇಷ ಮೆರಗು ತಂದವು. ಕಾರ್ಯಕ್ರಮದ ಸ್ವಾಗತವನ್ನು ಸಂಸ್ಥೆಯ ಅಧ್ಯಕ್ಷ ರುದ್ರಪ್ಪ ಬಂಢಾರಿ ನೆರವೇರಿಸಿದರು. ಹಿರಿಯ ಪತ್ರಕರ್ತ ರಮೇಶ ಸುರ್ವೆ ಕಾರ್ಯಕ್ರಮ ನಿರ್ವಹಿಸಿದರು. ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಪಂಪನಗೌಡ ಎಂ. ಪಿ. ಹೀರಾ ವಂದಿಸಿದರು. ಕರ್ನಾಟಜ ರತ್ನ ಪುನೀತ್ ರಾಜ್ಕುಮಾರ್ ಸಾಂಸ್ಕೃತಿಕ ಲೋಕೋತ್ಸವ ನಿಮಿತ್ಯ ಹಲವಾರು ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ನಡೆಯಿತು.

Attachments area