ವಿಜಯನಗರ : ಅಂತಿಮ ಅಧಿಸೂಚನೆ ಹೊರಡಿಸಿ

ಹೂವಿನಹಡಗಲಿ ಜ 10 : ನೂತನ ವಿಜಯನಗರ ಜಿಲ್ಲೆ ಘೋಷಿಸಿರುವ ಸರ್ಕಾರ ಕೂಡಲೇ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ರಂಗಭಾರತಿ ಕಾರ್ಯಾಧ್ಯಕ್ಷೆ ಎಂ.ಪಿ.ಸುಮಾ ವಿಜಯ್ ಒತ್ತಾಯಿಸಿದರು.
ಆಡಳಿತಾತ್ಮಕ ದೃಷ್ಟಿಯಿಂದ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿರುವ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾಗಿದೆ. ಹೊಸಪೇಟೆ ಕೇಂದ್ರವಾಗಿರಿಸಿ ವಿಜಯನಗರ ಜಿಲ್ಲೆ ರಚಿಸುವುದರಿಂದ ಪಶ್ಚಿಮ ತಾಲೂಕುಗಳ ಜನರಿಗೆ ಅನುಕೂಲವಾಗಲಿದೆ. ಈ ಭಾಗದ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ನೂತನ ಜಿಲ್ಲೆ ರಚಿಸುವ ತೀರ್ಮಾನ ಬೆಂಬಲಿಸಿ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಹೇಳಿದರು.
ಹೂವಿನಹಡಗಲಿಯನ್ನೇ ಜಿಲ್ಲಾ ಕೇಂದ್ರವಾಗಿಸುವ ಆಶಯ ಎಂ.ಪಿ.ಪ್ರಕಾಶ್ ಅವರದಾಗಿತ್ತು. ಆ ಕಾರಣಕ್ಕಾಗಿಯೇ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಮೇಲೆ ಒತ್ತಡ ಹೇರಿ ಶೈಕ್ಷಣಿಕ ಜಿಲ್ಲೆಯನ್ನು ಘೋಷಿಸಿದ್ದರು. ಆದರೆ ಅದು ಈಡೇರಲಿಲ್ಲ. ಹೂವಿನಹಡಗಲಿಯನ್ನು ಜಿಲ್ಲೆ ಮಾಡುವ ದೂರದೃಷ್ಟಿಯಿಂದಲೇ ಎಂ.ಪಿ.ಪ್ರಕಾಶ್ ಅವರು ಹಲವು ವಿಭಾಗೀಯ ಕಚೇರಿಗಳನ್ನು ಇಲ್ಲಿಗೆ ಮಂಜೂರು ಮಾಡಿಸಿದ್ದರು. ಇದೀಗ ಹೊಸ ಜಿಲ್ಲೆ ಘೋಷಣೆ ಆಗಿರುವುದರಿಂದ ಇಲ್ಲಿರುವ ಯಾವುದೇ ವಿಭಾಗೀಯ ಕಚೇರಿಗಳನ್ನು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸಿದೇ ಹೊಸ ಕಚೇರಿಗಳನ್ನೇ ಮಂಜೂರು ಮಾಡಿಸಬೇಕು. ಹೂವಿನಹಡಗಲಿ, ಪರಪನಹಳ್ಳಿ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಆಗ್ರಹಿಸಿದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಕೆ.ಅಯ್ಯನಗೌಡ ಹಾಗೂ ಸದಸ್ಯರು ಇದ್ದರು.