ವಿಜಯನಗರದಲ್ಲಿ ವೈವಿದ್ಯಮಯ ಸ್ವೀಪ್ ಕಾರ್ಯಕ್ರಮಗಳು: ಸದಾಶಿವ ಪ್ರಭು


ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ5 : ಮೇ 7ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಮತದಾನದ ಪ್ರಮಾಣದಲ್ಲಿ ವಿಜಯನಗರ ಜಿಲ್ಲೆಯು ಉತ್ತಮ ಸ್ಥಾನ ಕಾಯ್ದುಕೊಳ್ಳುವ ಹಾಗೆ ವಿಜಯನಗರ ಜಿಲ್ಲೆಯಾದ್ಯಂತ ಗಮನಾರ್ಹ ರೀತಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಡಿಮೆ ಮತದಾನವಾದ ಮತಗಟ್ಟೆಗಳಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸುವುದು ಹಾಗೂ ಮತದಾರರನ್ನು  ಚುನಾವಣೆಯಲ್ಲಿ ಭಾಗವಹಿಸಿ ಮತದಾನ ಮಾಡುವಂತೆ ಪ್ರೇರೇಪಿಸುವುದು ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್‍ನಿಂದ ನಾನಾ ರೀತಿಯ ಕಾರ್ಯಕ್ರಮಗಳನ್ನು ನಡೆಸಿ ಮತದಾನದ ಕುರಿತು ವಿಶೇಷ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.
ವಿಜಯನಗರ ಜಿಲ್ಲೆಯ ಪ್ರಸಿದ್ಧ ಹಂಪಿ ವಿರೂಪಾಕ್ಷೇಶ್ವರ ಜಾತ್ರೆ, ಮೈಲಾರ ಜಾತ್ರೆ, ಕುರುವತ್ತಿ ಜಾತ್ರೆ ಹಾಗೂ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಜಾತ್ರೆ ಸೇರಿದಂತೆ ಇನ್ನೀತರ ಜಾತ್ರೆಗಳ ಸ್ಥಳದಲ್ಲಿ ಸೇರಿದ್ದ ಲಕ್ಷಾಂತರ ಜನಸಮೂಹದಲ್ಲಿ ಧ್ವನಿ ವರ್ಧಕ ಬಳಸಿ ಮತದಾನ ಜಾಗೃತಿ ಮೂಡಿಸಲಾಗಿದೆ.  ವಿಜಯನಗರ ಜಿಲ್ಲೆಯ ಎಲ್ಲಾ ನಗರ, ಪಟ್ಟಣ ಪ್ರದೇಶಗಳಲ್ಲಿ ಮತ್ತು ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಯಿಂದ ಮತ್ತು ಇನ್ನೀತರ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಪ್ರತಿ ದಿನ ಮನೆಮನೆಗೆ ಭೇಟಿ ನೀಡಿ ಮತದಾನದ ಜಾಗೃತಿ ಮೂಡಿಸಲಾಗಿದೆ.
ವಿಶೇಷವಾಗಿ ಕೆಎಸ್‍ಆರ್‍ಟಿಸಿ ಪ್ರಯಾಣಿಕರ ಬಸ್ ಟಿಕೇಟ್, ಜೆಸ್ಕಾಂ ಕರೆಂಟ್ ಬಿಲ್, ಕೆಎಂಎಫ್ ಹಾಲಿನ ಪ್ಯಾಕೇಟಗಳಲ್ಲಿ, ಆರೋಗ್ಯ ಇಲಾಖೆಯ ಆರೋಗ್ಯ ಚೀಟಿನಲ್ಲಿ ಮತದಾನ ಜಾಗೃತಿಯ ವಿಷಯ ಅಳವಡಿಸಿ ಅರಿವು ಮೂಡಿಸಲಾಗಿದೆ.
ನರೇಗಾ ಕಾಮಗಾರಿಗಳ ಸ್ಥಳದಲ್ಲಿ ಸಹ ಪ್ರತಿ ದಿನ ಕೂಲಿ ಕಾರ್ಮಿಕರಿಂದ ಮತದಾನ ಜಾಗೃತಿ ಅಭಿಯಾನ ನಡೆಸಲಾಗಿದೆ. ಜೊತೆಗೆ ಪ್ರತಿಜ್ಞಾ ವಿಧಿ ಬೋಧನೆ, 1950 ಚುನಾವಣಾ ಸಹಾಯವಾಣಿಯ ಬಗ್ಗೆ ಸಹ ತಿಳಿಸಿ ಮತ್ತು ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಂದ ರಂಗೋಲಿ ಮತ್ತು ಮೆಹಂದಿ ಸ್ಪರ್ಧೆ ನಡೆಸಿ ಮತದಾನ ಕುರಿತು ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆಯ ಘನ ತ್ಯಾಜ್ಯ ವಿಲೇವಾರಿ ವಾಹನಗಳಲ್ಲಿ ಮತದಾನದ ಕುರಿತು ಧ್ವನಿ ಸುರುಳಿಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ಬಸ್ ನಿಲ್ದಾಣಗಳಲ್ಲಿ ಮತದಾನ ಜಾಗೃತಿಯ ಜಿಂಗಲ್ಸ್ ಬಿತ್ತರಿಸಲಾಗಿದೆ.
ಮತದಾನ ಜಾಗೃತಿಗಾಗಿ ಎತ್ತಿನ ಬಂಡಿ ಜಾಥಾ, ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಮತ್ತು ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಬೈಕ್ ರ್ಯಾಲಿ, ವಿಕಲಚೇತನರಿಂದ ಟ್ರೈಸೈಕಲ್ ಜಾಥಾ, ಪತಂಜಲಿ ಯೋಗ ಸಮಿಯಿಂದ ಬೈಕ್ ರ್ಯಾಲಿ ನಡೆಸಿ ಮತ್ತು ಜಿಲ್ಲೆಯ ಬಿಎಡ್ ಮತ್ತು ಎಂಜಿನಿಯರಿಂಗ್ ಕಾಲೇಜಗಳಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಗಿದೆ. 
ವಿವಿಧ ಇಲಾಖೆಯಿಂದ ಕಾರ್ಖಾನೆಗಳಲ್ಲಿನ ಕಾರ್ಮಿಕರಿಗೆ, ಶೋರೂಮ್ ಸಿಬ್ಬಂದಿಗೆ, ಬಿಎಂಡಬ್ಲ್ಯೂ, ಎಸ್‍ಎಲ್‍ಆರ್ ಮೆಟಾಲಿಕ್ಸ್, ಆರ್‍ಬಿಎಸ್‍ಎಸ್‍ಎನ್ ಮೈನಿಂಗದಲ್ಲಿನ ಕಾರ್ಮಿಕರಿಗೆ ಸಹ ಮತದಾನ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‍ನ ಯೋಜನಾ ಅಂದಾಜು ಮೌಲ್ಯಮಾಪನಾಧಿಕಾರಿ ಪತ್ರಿಬಸಪ್ಪ ಎನ್.ಕೆ., ಅಧೀಕ್ಷಕರಾದ ಲೋಕೇಶ್ ಬಾಬು ಸೇರಿದಂತೆ ಇತರರು ಇದ್ದರು.