
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಏ12: ಭಾರತೀಯ ಜನತಾ ಪಕ್ಷ ನೂತನ ವಿಜಯನಗರ ಜಿಲ್ಲೆಯ ವಿಜಯನಗರ ಕ್ಷೇತ್ರವೂ ಸೇರಿದಂತೆ ಮೂರು ವಿಧಾನಸಭಾ ಕ್ಷೇತ್ರಗಳ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಮೂರು ಕ್ಷೇತ್ರಗಳಲ್ಲಿ ಯುವಶಕ್ತಿಗೆ ಮಣೆ ಹಾಕುವ ಮೂಲಕ ಹೊಸ ಸಂಚಲವನ್ನು ಮೂಡಿಸಿದೆ.
ಮಗನಿಗಾಗಿ ವೇದಿಕೆ ಬಿಟ್ಟುಕೊಟ್ಟ ವಿಜಯನಗರದ ಶಾಸಕ ಹಾಗೂ ಸಚಿವ ಆನಂದಸಿಂಗ್ ಪುತ್ರ ಸಿದ್ಧಾರ್ಥಸಿಂಗ್ ಗೆ, ಉಳಿದೆರಡು ಮೀಸಲು ಕ್ಷೇತ್ರಗಳಾದ ಹಡಗಲಿಯಲ್ಲಿ ಕೃಷ್ಣನಾಯ್ಕ್, ಕೂಡ್ಲಿಗಿಯಲ್ಲಿ ಲೋಕೇಶನಾಯಕ ಇಬ್ಬರು ಯುವ ವಲಸಿಗರಿಗೆ ಟಿಕೆಟ್ ನೀಡುವ ಮೂಲಕ ಯುವ ಕಣ್ಮಣಿಗಳಿಗೆ ಸೊಪ್ಪು ಹಾಕುವ ಮೂಲಕ ಹೊಸ ಸಂಚಲನವನ್ನು ಉಂಟುಮಾಡಿದೆ.
ತನ್ನಂತೆಯೇ ಕಳೆದ ಕೆಲ ವರ್ಷಗಳಿಂದ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡ ಯುವಕ ಸಿದ್ಧಾರ್ಥಸಿಂಗ್‍ಗೆ ಪಟ್ಟಭಿಷೇಕ ಮಾಡಲು ಮುಂದಾಗಿರುವ ಸಚಿವ ಆನಂದ್‍ಸಿಂಗ್ ಪುತ್ರನ ರಾಜಕೀಯ ಪ್ರವೇಶಕ್ಕಾಗಿಯೇ ಸ್ಥಾನ ತ್ಯಾಗಮಾಡಿದ್ದಾರೆ. ಸಮಾಜಸೇವಕನಾದರೂ ಬಿಜೆಪಿಯಲ್ಲಿ ಸಕ್ರೀಯವಾಗಿ ಕಾಣಿಸಿಕೊಂಡು ಕಾರ್ಯಕರ್ತನಾಗಿ ದುಡಿಯುತ್ತಿದ್ದ ಸಿದ್ಧಾರ್ಥಸಿಂಗ್ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಚುನಾವಣೆಯಲ್ಲಿಯೇ ಚುನಾವಣಾ ರಾಜಕೀಯದಿಂದ ದೂರ ಇರುವುದಾಗಿ ಹೇಳಿದ್ದರೂ ಕ್ಷೇತ್ರದ ಜನತೆಯ ಒತ್ತಾಯಿಸಿದರೆ ನೋಡೋಣ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದ್ದರೂ, ಆದರೆ ಇದೀಗ ಮಗನಿಗಾಗಿ ಕ್ಷೇತ್ರಬಿಟ್ಟುಕೊಡುವ ಮೂಲಕ ತಮ್ಮ ನಿಲುವನ್ನು ಇಂದಿಗೂ ಜೀವಂತವಾಗಿರುವಂತೆ ನೋಡಿಕೊಂಡಿದ್ದು ಮುಂದಿನ ಲೋಕಸಭಾ ಚುನಾವಣಾ ತಯಾರಿಯಲ್ಲಿ ತೊಡಗಿದ್ದಾರೆ ಎನ್ನುವ ಮಾತಿಗೆ ಪುಷ್ಠಿದೊರೆಯುವಂತೆ ಮಾಡಿದ್ದಾರೆ.
ಕೂಡ್ಲಿಗಿ ಕ್ಷೇತ್ರದಲ್ಲಿ 2018ರಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿಯಾಗಬಯಸಿದ್ದ ಲೋಕೇಶನಾಯಕ ದೊರೆಯದಿರುವಾಗ ಪಕ್ಷೇತರನಾಗಿ ಸ್ಪರ್ಥಿಸಿ 25ಸಾವಿರ ಮತ ಪಡೆದು ಮೂರನೇಸ್ಥಾನದಲ್ಲಿದ್ದರು ನಂತರ ಮತ್ತೆ ಚುನಾವಣಾ ನಂತರ ಕಾಂಗ್ರೆಸ್ ಸೇರಿ ಈ ಭಾರಿ ಟಿಕೆಟ್ ಸಿಕ್ಕೆ ಸಿಗುತ್ತೇ ಎಂಬ ವಿಶ್ವಾಸದಲ್ಲಿದ್ದಾಗ ಇತ್ತೀಜೆಗೆ ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣನವರ ಪುತ್ರ ಡಾ.ಶ್ರೀನಿವಾಸ ಕಾಂಗ್ರೆಸ್ ಸೇರಿ ಟಿಕೆಟ್ ಪಡೆದ ಕಾರಣ ಮುನಿಸಿಕೊಂಡಿದ್ದರು ಬಿಜೆಪಿ ಶಾಸಕ ಗೋಪಾಲಕೃಷ್ಣರವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಯುವಕ ಲೋಕೇಶನಾಯಕರವರಿಗೆ ಮಣೆಹಾಕಿ ಸ್ಥಾನ ನೀಡಿದೆ.
ಮತ್ತೊಂದಡೆ ಹಡಗಲಿಯಲ್ಲಿ ಕಾಂಗ್ರೆಸ್ ಪ್ರಬಲ ಆಕಾಂಕ್ಷಿಯಾಗಿದ್ದ ಕೃಷ್ಣನಾಯ್ಕ್ ಮತ್ತೆ ಟಿಕೆಟ್ ಕೈತಪ್ಪುವುದು ಎನ್ನುವುದು ಖಚಿತವಾಗುತ್ತಿದ್ದಂತೆಯೇ ಬಿಜೆಪಿ ಸೇರಿ ಕಮಲ ಮುಡಿಯುವಲ್ಲಿ ಯಶಸ್ವಿಯಾದರು. ಮಾಜಿ ಶಾಸಕ ಚಂದ್ರಾನಾಯ್ಕ್ ಆಕಾಂಕ್ಷಿಯಾಗಿದ್ದರೂ ಯುವಕನಿಗೆ ಮಣೆಹಾಕಿದ್ದು ಚಂದ್ರಾನಾಯ್ಕ ನಡೆಯೂ ಬಿಜೆಪಿ ಸಾಹಸಕ್ಕೆ ಹೊಸ ಟ್ವಿಸ್ಟ್ ನೀಡಲಿದೆ.
ಘೋಷಿತ ಈ ಮೂರು ಕ್ಷೇತ್ರಗಳಲ್ಲಿ ಮಾಜಿ ಶಾಸಕರು, ಪ್ರಬಲ ಆಕಾಂಕ್ಷಿಗಳಿದ್ದರೂ ವರಿಷ್ಠರ ನಿರ್ಧಾರ ಕುತೂಹಲ ಕೆರಳಿಸುವಂತೆ ಮಾಡಿದ್ದು ಫಲಿತಾಂಶವೇ ಉತ್ತರಿಸಲಿದೆ. ತೀವ್ರ ಪೈಪೋಟಿ ಇರುವ ಹರಪನಹಳ್ಳಿ ಮತ್ತು ಹಗರಿಬೊಮ್ಮನಹಳ್ಳಿ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸದಿರುವುದು ಭಾರಿ ಕುತುಹಲಕ್ಕೂ ಕಾರಣವಾಗಿದೆ.
ಒಟ್ಟಾರೆ ಎಲ್ಲಾ ವಿರೋಧ ಹಾಗೂ ಆಕಾಂಕ್ಷಿಗಳ ಮಧ್ಯ ಅಚ್ಚರಿಯ ಮೂವರು ಯುವಕರಿಗೆ ಸ್ಥಾನ ಮಾಡಿಕೊಟ್ಟಿರುವ ಬಿಜೆಪಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.