ವಿಜಯನಗರದಲ್ಲಿ ಮಳೆಯ ಅವಾಂತರ139 ಮನೆಗಳು ಭಾಗಶಃ ಹಾನಿ, ಓರ್ವ ಮಹಿಳೆ ಸಾವು


ಸಂಜೆವಾಣಿ ವಾರ್ತೆ
ಹೊಸಪೇಟೆ ಜು28: ವಿಜಯನಗರ ಜಿಲ್ಲೆಯಲ್ಲಿ ನಿರಂತರವಾಗಿ 15 ದಿನಗಳ ಕಾಲ ಸುರಿದ ಮಳೆ ನಿನ್ನೆ ಸ್ವಲ್ಪ ಮಟ್ಟಿನ ವಿರಾಮ ನೀಡಿದ್ದು ಜನ ಜೀವನವನ್ನು ಅಸ್ಥವ್ಯಸ್ತಗೊಳಿಸಿದೆ. ಜಿಲ್ಲೆಯಲ್ಲಿ 139 ಮನೆಗಳು ಹಾನಿಗೊಳಗಾಗಿದ್ದು ಓರ್ವ ಮಹಿಳೆ ಅಸುನೀಗಿದ್ದು ಧೃತಿಗೆಡುವಂತೆ ಮಾಡಿದೆ.
ಜಿಲ್ಲೆಯ ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದ ಕಾಡಪ್ಪನವರ ನಾಗಮ್ಮ (60) ಮೃತಪಟ್ಟ ಮಹಿಳೆಯಾಗಿದ್ದು  ಜು.25ರ ಬೆಳಗ್ಗೆ ಮನೆ ಗೋಡೆ ಕುಸಿದುಬಿದ್ದ ಗಂಭೀರ ಗಾಯಗೊಂಡಿದ್ದ ವೃದ್ದೆಯನ್ನು ಕೊಪ್ಪಳ ಜಿಲ್ಲಾಸ್ಪತ್ರೆ ವೃದ್ಧೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿತ್ತು. ಬುಧವಾರ ರಾತ್ರಿ 10.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಕಿಮ್ಸ್‍ನಲ್ಲಿ ವೃದ್ಧೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಜಿಲ್ಲೆಯಲ್ಲಿ ನಿರಂತರ ಮಳೆಗೆ ಮನೆಗಳು ಶಿಥಿಲಗೊಂಡು 139 ಮನೆಗಳು ಬಿದ್ದಿವೆ. ಜೊತೆಗೆ ಒಂದು ಎಮ್ಮೆ, ಒಂದು ಆಕಳು ಮತ್ತು ಎರಡು ಕುರಿಗಳು ಕೂಡ ಅಸುನೀಗಿದ್ದು ಇದೀಗ ಒಂದು ಹಂತಕ್ಕೆ ಬಂದಿದ್ದು ಅಂತಿಮವಾಗಿ ಎಲ್ಲಾ ತಾಲೂಕುಗಳ ಕಂದಾಯ ಅಧಿಕಾರಿಗಳ ಸರ್ವೆ ಬಳಿಕವೇ ನಿಖರ ಹಾನಿ ತಿಳಿಯಲಿದೆ.
ಹೊಲ ಗದ್ದೆಗಳಿಗೂ ನೀರು:
ಹೊಸಪೇಟೆಯ ಐತಿಹಾಸಿಕ ಜಂಬುನಾಥನಹಳ್ಳಿಯ ರಾಯರ ಕೆರೆ ಪ್ರದೇಶದ ಕೃಷಿ ಭೂಮಿಗಳು ಜಲಾವೃತವಾಗಿದ್ದು, ನೂರಾರು ಎಕರೆಯಲ್ಲಿ ಬೆಳೆದ ಕಬ್ಬಿನ ಬೆಳೆಗೆ ಹಾನಿಯಾಗಿದೆ. ಮಳೆ ಬಂದಾಗ ಮಳೆ ನೀರು ಬೆಳೆಗಳಿಗೆ ನುಗ್ಗುವುದು ವಾಡಿಕೆಯಾಗಿದೆ. ಇದರಿಂದಾಗಿ ಈ ಭಾಗದ ರೈತರು ಸಂಕಷ್ಟಕ್ಕೀಡಾಗುತ್ತಿದ್ದಾರೆ.ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣದ ನಂತರ ವ್ಯವಸ್ಥಿತ ಮಾರ್ಗವಿಲ್ಲದೆ ಪ್ರತಿಭಾರಿಯೂ ಮಳೆಗಾಲದಲ್ಲಿ ಬೆಳೆಹಾನಿಗೆ ಕಾರಣವಾಗುತ್ತಿದ್ದು ಶಾಶ್ವತ ಪರಿಹಾರಕ್ಕೆ ರೈತರು ಆಗ್ರಹಿಸುತ್ತಾರೆ.