ವಿಜಯನಗರದಲ್ಲಿ  ಏಕಕಾಲಕ್ಕೆ 4.88 ಲಕ್ಷ ಜನರಿಂದ ಸಂವಿಧಾನ ಪ್ರಸ್ತಾವನೆ ಓದುಯುವಜನರಲ್ಲಿ ಸಂವಿಧಾನದ ಅರಿವು ಅಗತ್ಯ: ಡಿಸಿ ದಿವಾಕರ


ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ.16: ಯುವಜನರಲ್ಲಿ ಭಾರತ ಸಂವಿಧಾನದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವುದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ದಿವಾಕರ ಎಂ.ಎಸ್. ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಶುಕ್ರವಾರ ನಗರದ ಒಳಾಂಗಣ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಏಕಕಾಲದಲ್ಲಿ ಭಾರತ ಸಂವಿಧಾನ ಪ್ರಸ್ತಾವನೆ ಓದಿದ ನಂತರ ಅವರು ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸಲು ಪ್ರಯತ್ನಿಸಿ ಯಶಸ್ವಿಯಾದರು. ಶಿಕ್ಷಣಕ್ಕೆ ಅನುಗುಣವಾಗಿ ಸಮಾನತೆ, ಪ್ರಜಾಪ್ರಭುತ್ವ ಅರಿಯಲು ಸಂವಿಧಾನ ಅಗತ್ಯವಾಗಿದೆ. ಏಕತೆ ಇಲ್ಲದಿದ್ದರೆ ಒಂದು ರಾಜ್ಯದ ಜೊತೆ ಇನ್ನೊಂದು ರಾಜ್ಯ ಹೊಡೆದಾಡಬೇಕಿತ್ತು, ಅದೇ ರೀತಿ ಸಂವಿಧಾನದ ಮೂಲಕ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಇದ್ದುದರಿಂದಲೇ ಎಲ್ಲರಿಗೂ ಆಹಾರ ಸಿಗುವಂತಾಯಿತು ಎಂದರು.
ಸಂವಿಧಾನದಲ್ಲಿ ಭಿಕ್ಷುಕನಿಗೂ, ಶ್ರೀಮಂತನಿಗೂ ಒಂದೇ ಕಾನೂನು ಇದೆ. ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯ ಸಹ ಒದಗಿಸಿದೆ. ಸಂವಿಧಾನವನ್ನು ಪ್ರತಿಯೊಬ್ಬರೂ ಕಾದಂಬರಿ ರೀತಿಯಲ್ಲಿ ಓದಿದಾಗ ಉತ್ತಮ ನಾಗರೀಕರಾಗಲು ಸಾಧ್ಯವಾಗುತ್ತದೆ. ಈಗಾಗಲೇ ಜಿಲ್ಲೆಯ ವಸತಿ ನಿಲಯದಲ್ಲಿ ಮಕ್ಕಳಿಗೆ ಸಂವಿಧಾನದ ಪೀಠಿಕೆಯನ್ನು ಓದಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯನ್ನು ಏಕಕಾಲದಲ್ಲಿ ನೆರೆದಿದ್ದವರು ಓದಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಂಜುನಾಥ ಹೆಚ್.ವಿ. ಅವರು ಮಾತನಾಡಿ ಭಾರತದ ಸಂವಿಧಾನ ಪೀಠಿಕೆಯ ಜಾಗತಿಕ ವಾಚನಕ್ಕಾಗಿ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಅಭಿಯಾನದಲ್ಲಿ ಒಟ್ಟು 4.88 ಲಕ್ಷ ಜನರು ನೋಂದಾಯಿಸಿದ್ದರು. ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಏಕಕಾಲಕ್ಕೆ ಸಂವಿಧಾನದ ಪೀಠಿಕೆಯನ್ನು ಓದಿದರು. ನೋಂದಾಯಿಸಿದ್ದ ಎಲ್ಲರಿಗೂ ಆನ್‍ಲೈನ್ ಪ್ರಮಾಣ ಪತ್ರ ವಿತರಿಸಲಾಗುವುದು ಎಂದರು.
ಕನ್ನಡ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಎ.ವೆಂಕಟೇಶ್ ಅವರು ಭಾರತ ಸಂವಿಧಾನದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ.ಬಿ.ರಾಮಚಂದ್ರ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಂಕರ್ ನಾಯ್ಕ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಭೀಮಪ್ಪ ಲಾಳಿ, ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಶು, ತಿಮ್ಮಪ್ಪ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.