ವಿಜಯನಗರದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ 17: ಕೆ.ಕೆ.ಆರ್.ಡಿ.ಬಿ ಯೋಜನೆಯಡಿ ಮೈಕ್ರೋ ಹಾಗೂ ಮ್ಯಾಕ್ರೋ ಅನುದಾನದಲ್ಲಿ ವಿಜಯನಗರ ಜಿಲ್ಲೆಯಲ್ಲಿ 179 ಕೋಟಿ ರೂ.ಗಳ ಕ್ರೀಯಾ ಯೋಜನೆ ಅನುಮೋದನೆಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಧ್ವಜಾರೋಹಣೆ ನೆರವೇರಿಸಿ, ವಿವಿಧ ತುಕಡಿಗಳಿಂದ ಧ್ವಜ ವಂದನೆ ಸ್ವೀಕರಿಸಿ ಮಾತನಾಡಿ, ರಾಷ್ಟ್ರಕ್ಕೆ 1947ರ ಆಗಸ್ಟ್ 15 ಕ್ಕೆ ಸ್ವಾತಂತ್ರ್ಯ ದೊರೆತರೂ ಹೈದ್ರಾಬಾದ್ ಸಂಸ್ಥಾನದ ಪ್ರಜೆಗಳಿಗೆ ಸ್ವಾತಂತ್ರ್ಯ ದೊರೆತಿರಲಿಲ್ಲ. ಬ್ರಿಟಿಷರ ಕುಮ್ಮಕ್ಕಿನಿಂದ ಹೈದರಾಬಾದ್ ಪ್ರಾಂತ್ಯವನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದ ನಿಜಾಮರ ವಿರುದ್ಧ ಭಾರತದ ಉಕ್ಕಿನ ಮನುಷ್ಯ ಸರ್ದಾರ ವಲ್ಲಭಬಾಯಿ ಪಟೇಲರು 1948 ರ ಸೆಪ್ಟೆಂಬರ್ 13ರಂದು ದಿಟ್ಟತನದಿಂದ ಭಾರತ ಸೇನೆಯ ಮೇಜರ್ ಜೇನ್ ಚೌದ್ರಿ ನೇತೃತ್ವದಲ್ಲಿ ಕೈಗೊಂಡ ಪೊಲೀಸ್ ಕಾರ್ಯಾಚರಣೆಯಲ್ಲಿ ಹೈದ್ರಾಬಾದ್ ನಿಜಾಮರು ಶರಣಾಗಿ ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆಗೊಳ್ಳಲು ಒಪ್ಪಿಕೊಂಡನು. ಇದರ ಪರಿಣಾಮವಾಗಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ಧರ್ಮ ಮೊದಲಾದ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿ ವಿಶ್ವವೇ ನಿಬ್ಬೆರಗಾಗುವಂತಹ ಜಗಜ್ಯೋತಿ ಬಸವಣ್ಣನವರು ಸಾಮಾಜಿಕ ಪರಿವರ್ತನೆಗೆ ಬುನಾದಿ ಹಾಕಿದ ಈ ಪವಿತ್ರ ಭೂಮಿ 1948 ರ ಸೆಪ್ಟೆಂಬರ್ 17ರಂದು ರಾಜ್ಯದ ಇತರ ಭಾಗಗಳಂತೆ ಸ್ವತಂತ್ರವಾಗಿ ಉಸಿರಾಡಲು ಸಾಧ್ಯವಾಯಿತು ಎಂದರು.
ಜಿಲ್ಲೆಯ ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮೂಲ ಸೌಲಭ್ಯಗಳ ಅಭಿವೃದ್ಧಿಗಾಗಿ 91 ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಇವುಗಳಲ್ಲಿ ಶೇ.58 ರಷ್ಟು ಶಿಕ್ಷಣಕ್ಕೆ ಕಾಯ್ದಿರಿಸಲಾಗಿದೆ. ನೂತನ ಜಿಲ್ಲೆಯ ಅಭಿವೃದ್ಧಿಗಾಗಿ ಮ್ಯಾಕ್ರೋ ಯೋಜನೆಯಲ್ಲಿ ಕ್ರೀಡಾಂಗಣಕ್ಕೆ 3.50 ಕೋಟಿ, ವಿಶ್ವ ಪಾರಂಪರಿಕ ಸ್ಥಾನವಾಗಿರವ ಹಂಪಿಯಲ್ಲಿ 1 ಕೋಟಿ ರೂ.ಗಳಲ್ಲಿ “ ಸಂವಹನ ಕೇಂದ್ರ (Interpretation Center), ಶಾಲಾ ಕಾಲೇಜುಗಳಲ್ಲಿ ವಿಜ್ಞಾನ ಲ್ಯಾಬ್, ಕಂಪ್ಯೂಟರ್ ಲ್ಯಾಬ್ ಹಾಗೂ ಶಿಕ್ಷಣ ಸಾಮಾರ್ಥ್ಯವನ್ನು ಹೆಚ್ಚಿಸಲು 10 ಕೋಟಿ ರೂ. 7 ಹೋಬಳಿ ಕೇಂದ್ರಗಳಲ್ಲಿ 4 ಕೋಟಿ ರೂ.ಗಳಲ್ಲಿ ಮಾದರಿ ಗ್ರಂಥಾಲಯಗಳು, ಜಿಲ್ಲಾ ಕೇಂದ್ರದಲ್ಲಿ 2 ಕೋಟಿ ಮೊತ್ತದಲ್ಲಿ ರಂಗ ಮಂದಿರ, ಜಿಲ್ಲಾ ಪೊಲೀಸ್ ಇಲಾಖೆಗೆ 4 ಕೋಟಿ ಹಾಗೂ ಜಿಲ್ಲಾ ಅರಣ್ಯ ಇಲಾಖೆಗೆ 1.56 ಕೋಟಿ ರೂ.ಗಳ ಮೊತ್ತದಲ್ಲಿ ಮೂಲಭೂತ ಸೌಲಭ್ಯಗಳನ್ನು ಹಾಗೂ ಮುಖ್ಯವಾಗಿ ಯುವಕ ಯುವತಿಯರಿಗೆ ತರಬೇತಿ ನೀಡಲು ಕೌಶಲ್ಯ ಕೇಂದ್ರಕ್ಕೆ 2.06 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಇವುಗಳನ್ನು ತ್ವರಿತವಾಗಿ ಅನುಷ್ಠಾನ ಮಾಡಲು ಜಿಲ್ಲಾ ಆಡಳಿತವು ಕ್ರಮ ಕೈಗೊಳ್ಳುತ್ತಿದೆ ಎಂದರು.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ “ವಿವೇಕ ಯೋಜನೆಯಡಿ” ಯಲ್ಲಿ ಡಿ.ಎಂ.ಎಫ್, ಸಪ್ಮಿಜ್, ಕೆ.ಕೆ.ಆರ್.ಡಿ.ಬಿ ಅನುದಾನದಲ್ಲಿ 130 ಹೊಸ ಸ್ಮಾರ್ಟ್ ಕ್ಲಾಸ್ ರೂಮ್ಗಳನ್ನು ನಿರ್ಮಿಸಲಾಗುತ್ತಿದೆ. ಈ ಭಾಗದ ಅಭಿವೃದ್ಧಿಗೆ ಸರಕಾರವು ಮುಂಚೂಣಿಯಲ್ಲಿರುತ್ತದೆ ಎಂದು ಹೇಳಿದರು.
ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ವಿಜಯನಗರ ಜಿಲ್ಲೆಯ ಶಿಕ್ಷಕರಾದ ಡಾ.ಚೇತನ ಬಣಕಾರ ಹಾಗೂ ನಿರಂಜನ ಪಿ.ಜೆ. ಇವರುಗಳು ಅಭಿನಂದನಾರ್ಹರು. ಸ್ವಾಭಿಮಾನಿ ಸರಕಾರಿ ಶಾಲೆಯೆಂದು ಗುರುತಿಸಿ ವಿಶೇಷ ಛಾಪು ಮೂಡಿಸಿ ರಾಜ್ಯದ ಗಮನ ಸೆಳೆದು ಪ್ರಶಸ್ತಿಯನ್ನು ಪಡೆದ ಸರಕಾರಿ ಪ್ರೌಢಶಾಲೆ, ನಿಂಬಳಗೆರೆ ಶಾಲಾ ಶಿಕ್ಷಕರಿಗೆ ಅಭಿನಂದನೆಗಳು, ರಾಜ್ಯ ಚುನಾವಣಾ ಆಯೋಗದಿಂದ ಪ್ರಶಂಸೆಗಳೊಳಗಾಗಿ ಪ್ರಥಮ ಬಹುಮಾನ ಪಡೆದ ಸರ್ಕಾರಿ ಪ್ರೌಢಶಾಲೆ ಹಿರೇಕೊಳಚೆಯ ಚುನಾವಣಾ ಸಾಕ್ಷರತಾ ಕ್ಲಬ್ನ ಸದಸ್ಯರು ವಂದನಾರ್ಹರು ಎಂದರು. ನಗರದಲ್ಲಿ ಡಿಎಂಎಫ್ 7 ಕೋಟಿ ಅನುದಾದಲ್ಲಿ ಮಹಿಳಾ ಪದವಿ ಪೂರ್ವ ಕಾಲೇಜು ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು.
ಜಿಲ್ಲಾಧಿಕಾರಿ ಅನಿರುದ್ಧ್ ಪಿ.ಶ್ರವಣ್, ಎಸ್ಪಿ ಡಾ.ಕೆ.ಅರುಣ್, ಸಿಇಒ ಹರ್ಷಲ್ ಬೋಯರ್ ನಾರಾಯಣ್ ರಾವ್, ಎಡಿಸಿ ಮಹೇಶ್ ಬಾಬು, ಎಸಿ ಸಿದ್ದರಾಮೇಶ್ವರ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಆನಂದ್, ಪೌರಾಯುಕ್ತ ಮನೋಹರ್, ಡಿಎಚ್ಒ ಸಲೀಂ, ತಹಸೀಲ್ದಾರ್ ವಿಶ್ವಜೀತ್ ಮೆಹತಾ ಇತರರು ಪಾಲ್ಗೊಂಡಿದ್ದರು.

Attachments area