ವಿಜಯದಾಸರು ಜ್ನಾನವನ್ನು ಪಸರಿಸುತ್ತ ತಮ್ಮ ಜೀವನ ಕಳೆದರು

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ರಾಯಚೂರು, ಹೆಚ್ ಸಿ ಎಂ ಎಸ್ ಕೆ ಶಿಕ್ಷಣ ಮಹಾವಿದ್ಯಾಲಯ ಆಶ್ರದಯಲ್ಲಿ ದಾಸ ಸಾಹಿತ್ಯ ಮತ್ತು ಮಹಿಳೆ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಗುರುವಾರ ಜರುಗಿತು.
ಉಪನ್ಯಾಸಕರಾಗಿ ಆಗಿಮಿಸಿದ ರಾಜಶ್ರೀಕಲ್ಲೂರಕರ್ ಮಾತನಾಡಿ, ವಚನ ಸಾಹಿತ್ಯದ ನಂತರ ಹರಿದಾಸ ಸಾಹಿತ್ಯ ಬಂದಿತು. ಪುರಾಣ, ವೇದ, ಉಪನಿಷತ್ತಿನ ಹಿತವಚನಗಳನ್ನು ಸಾಮಾನ್ಯ ಜನರಿಗೆ ತಿಳಿಸುವ ಕೆಲಸ ನಡೆಯಿತು.
ವಿಜಯದಾಸರು, ಪುರಂದರ ದಾಸರು ಪ್ರಮುಖವಾಗಿ ಹರಿದಾಸ ಸಾಹಿತ್ಯದಲ್ಲಿ ಕಂಡು ಬರುತ್ತಾರೆ. ೧೪ ನೇ ಶತಮಾನದಲ್ಲಿ ಸಮಾಜಕ್ಕೆ ಒಳ್ಳೆಯ ಹಿತೋಪದೇಶ ನೀಡಲಾಯಿತು.
ವಿಜಯ ದಾಸರು ಮಾನ್ವಿ ತಾಲೂಕಿನ ಚೀಕಲಪರ್ವಿ ಗ್ರಾಮದವರಾಗಿದ್ದಾರೆ. ವಿಜಯ ದಾಸರು ಜ್ನಾನ ವನ್ನು ಪಸರಿಸುತ್ತ ತಮ್ಮ ಜೀವನ ಕಳೆದರು. ಹೆಣ್ಣು, ಹೊನ್ನು, ಮಣ್ಣಿನ ಮೋಹವನ್ನು ತೊರೆದು ಬಾಳುವಂತೆ ಸಂದೇಶ ನೀಡಿದರು. ಹರಿದಾಸರು ಕಡಿಮೆ ವಿದ್ಯಾಭ್ಯಾಸವನ್ನು ಮಾಡಿದ್ದರೂ ಕೂಡ ಭಕ್ತಿ ಸಾಹಿತ್ಯದ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ. ಹೆಳವನಕಟ್ಟೆ ಗಿರಿಯಮ್ಮ, ತಿಮ್ಮಮ್ಮ, ಹರಪನಹಳ್ಳಿ ಭೀಮವ್ವ, ಗಲಗಲಿ ಅವ್ವ , ರಮಾಬಾಯಿ ಸೇರಿದಂತೆ ಅನೇಕ ಮಹಿಳೆಯರು ದಾಸ ಸಾಹಿತ್ಯದಲ್ಲಿ ಪ್ರಮುಖರಾಗಿದ್ದಾರೆ.
ಇದೀಗ ಮಂದಾಕಿನ ಅವರು ದಾಸ ಸಾಹಿತ್ಯ ಅಧ್ಯಯನ ಮಾಡುವ ಮೂಲಕ ಹರಿದಾಸ ಸಾಹಿತ್ಯವನ್ನು ಪ್ರಚುರಪಡಿಸುತ್ತಿದ್ದಾರೆ. ೨೦ನೆ ಶತಮಾನದಲ್ಲಿ ಸರಸ್ವತಿ ಎಂಬುವರು ಹರಿದಾಸ ಸಾಹಿತ್ಯದಲ್ಲಿ ತೊಡಗಿಕೊಂಡಿದ್ದಾರೆ. ಆಧುನಿಕ ಹರಿದಾಸ ಸಾಹಿತ್ಯದಲ್ಲಿ ಅನೇಕರು ಪ್ರಚಾರದಲ್ಲಿ ತೊಡಗಿದರು.
ಪರ ಸ್ಯ್ರೀ, ಪರ ಧನದ ಬಗ್ಗೆ ಮೋಹ ಪಡಬೇಡಿ ಎಂದು ಪುರಂದರ ದಾಸರು ಹೇಳುತ್ತಾರೆ. ಪುರಂದರ ದಾಸರು ಕೋಟಿ ಸಂಪತ್ತಿನ ಶ್ರೀಮಂತರಿದ್ದರು. ಅದನ್ನೆಲ್ಲ ತೊರೆದು ಕೀರ್ತನೆ, ದಾಸ ಸಾಹಿತ್ಯದ ಮೂಲಕ ಸಮಾಜವನ್ನು ಸುಧಾರಿಸಲು ಮುಂದಾದರು. ಕನಕದಾಸರು ವೀರರು, ಕಲಿಗಳಾಗಿದ್ದರೂ ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಂಡರು. ಪ್ರಭು ಸಂಹಿತ, ಮಿತ್ರ ಸಂಹಿತ, ಕಾಂತಾ ಸಂಹಿತೆಯನ್ನು ಪ್ರಮುಖವಾಗಿ ಹರಿದಾಸ ಸಾಹಿತ್ಯದಲ್ಲಿ ಕಾಣಬಹುದು. ಹರಿ ದಾಸ ಸಾಹಿತ್ಯದಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಶಕ್ತಿಯಿದೆ. ಮಹಿಳಾ ಹರಿದಾಸ ಸಾಹಿತ್ಯದ ಕುರಿತು ಇನ್ನೂ ಸಂಶೋಧನೆಗಳು ನಡೆಯಬೇಕಿದೆ. ಅಂದಿನ ಕಾಲದ ಮಹಿಳೆಯರಿಗೆ ಹೆಚ್ವಿನ ಅವಕಾಶಗಳು ಇರಲಿಲ್ಲ.
ಹಿರಿಯ ಪತ್ರಕರ್ತ ಬಿ.ವೆಂಕಟಸಿಂಗ್ ಅವರು ಮಾತನಾಡಿ, ದಾಸ ಸಹಿತ್ಯವು ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ವಿದ್ಯಾರ್ಥಿಗಳು ದಾಸ ಸಾಹಿತ್ಯವನ್ನು ಅಭ್ಯಾಸ ಮಾಡುವ ಮೂಲಕ ಜೀವನದಲ್ಲಿ ಆದರ್ಶಗಳನ್ನು ಅಳವಡಿಸಿಕೊಳ್ಳಬೆಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಯಚೂರು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವೆಂಕಟೇಶ ಬೇವಿನಬೆಂಚಿ ಮಾತನಾಡಿ, ಜಗತ್ತಿನಲ್ಲಿಯೇ ಶ್ರೇಷ್ಠವಾಗಿರುವುದು ವಚನ ಚಳುವಳಿ, ದಾಸ ಚಳುವಳಿಯಾಗಿದೆ. ವಚನ ಚಳುವಳಿಯಲ್ಲಿ ಮಹಿಳೆಯರು ಮುಂಚೂಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಆದರೆ ದಾಸ ಸಾಹಿತ್ಯ ಚಳುವಳಿಯಲ್ಲಿ ಮಹಿಳೆಯರ ಹೆಸರು ಕಡಿಮೆ ಸಂಖೆಯಲ್ಲಿ ಕಂಡು ಬಂದಿವೆ. ಇಂದಿನ ಉಪನ್ಯಾಸದಲ್ಲಿ ರಾಜಶ್ರೀಕಲ್ಲೂರಕರ್ ಅವರು ಕೆಲ ಮಹಿಳೆಯರ ಹೆಸರುಗಳನ್ನು ಪ್ರಸ್ತುತ ಪಡಿಸಿದ್ದು ಉಪಯುಕ್ತ ಮಾಹಿತಿಯಾಗಿದೆ. ಮುಂದಿನ ದಿನಗಳಲ್ಲಿ ದಾಸ ಸಾಹಿತ್ಯದಲ್ಲಿನ ಮಹಿಳೆಯರ ಕುರಿತು ಸಂಶೋಧನೆಗಳು ನಡೆಯಬೇಕಿದೆ ಎಂದರು. ಭಾರತ ದೇಶದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆ ಮಾಡಲು ಮುಂದಾಗಬೇಕು. ವಿವಿಧ ಕ್ಷೇತ್ರಗಲ್ಲಿ ಮಹಿಳೆಯರು ಪಾಲ್ಗೊಳ್ಳುವ ಅವಶ್ಯಕತೆಯಿದೆ ಎಂದರು. ಅಹಂ ಭಾವನೆ ತೊರೆದರೆ ಮಾತ್ರ ಬದುಕು ಸುಖವಾಗಿರುವುದು ಎಂಬ ಸಾರವನ್ನು ಎಲ್ಲಾ ದಾಸರು, ಶರಣರು ತಿಳಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಹೆಚ್ ಸಿ ಎಂ ಎಸ್ ಕೆ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷರಾದ ಶರಣು ಭೂಪಾಲ ನಾಡಗೌಡ ಉದ್ಘಾಟಿಸಿದರು. ದತ್ತಿದಾನಿಗಳಾದ ಶ್ರೀಲಕ್ಷ್ಮಿ, ಈಶಾನ್ಯ ವಾರ್ತೆ ಪತ್ರಿಕೆ ಸಂಪಾದಕ ಖಾನ್ ಸಾಬ್ ಮೋಮಿನ್ , ಪ್ರಾಚಾರ್ಯರಾದ ಮಂಜುನಾಥ ಪಾಟೀಲ್ ವಟಗಲ್ ಉಪಸ್ಥಿತರಿದ್ದರು. ಕಸಾಪ ಸಂಘಟನಾ ಕಾರ್ಯದರ್ಶಿಗಳಾದ
ರೇಖಾ ಬಡಿಗೇರ್ , ದೇವೇಂದ್ರಮ್ಮ, ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಇದ್ದರು.
ಉಪನ್ಯಾಸಕ ಹೆಮರೆಡ್ಡಿ ನಿರೂಪಿಸಿದರು.
ಚಂದ್ರಶೇಖರ ವಂದಿಸಿದರು.