ವಿಜಯಕುಮಾರ ಆನಂದೆ ಆಯ್ಕೆ ಖಚಿತ

ಬೀದರ: ಸೆ.23:ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ತೆರವಾದ ಸದಸ್ಯ ಸ್ಥಾನಕ್ಕೆ ಜಿಲ್ಲೆಯಿಂದ ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ವಿಜಯಕುಮಾರ ಆನಂದೆ ಅವರ ಅವಿರೋಧ ಆಯ್ಕೆ ಖಚಿತವಾಗಿದೆ.
ಸದಸ್ಯ ಸ್ಥಾನಕ್ಕೆ ವಿಜಯಕುಮಾರ ಆನಂದೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ.
ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಸದಸ್ಯ ಸ್ಥಾನದ ಚುನಾವಣೆಯಲ್ಲಿ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಅಧ್ಯಕ್ಷರಿಗೆ ಮಾತ್ರ ಮತ ಹಕ್ಕು ಇದೆ. ಬಸವಕಲ್ಯಾಣ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ತಹಶೀಲ್ದಾರ್ ಆಡಳಿತಾಧಿಕಾರಿ ಆಗಿದ್ದಾರೆ. ಬೀದರ್, ಭಾಲ್ಕಿ, ಹುಮನಾಬಾದ್ ಹಾಗೂ ಔರಾದ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರು ಮಾತ್ರ ಮತಾಧಿಕಾರ ಹೊಂದಿದ್ದಾರೆ.
ಸೆ. 24 ರಂದು ಸದಸ್ಯ ಸ್ಥಾನದ ಚುನಾವಣೆಯ ನಾಮಪತ್ರ ಪರಿಶೀಲನೆ, ಸೆ. 27 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಸೆ. 30 ಮತದಾನದ ದಿನವಾಗಿದೆ. ಮತದಾನ ದಿನದಂದೇ ಸದಸ್ಯರ ಆಯ್ಕೆಯ ಅಧಿಕೃತ ಘೋಷಣೆ ಆಗಲಿದೆ. ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ತುಳಸಿರಾಮ ಲಾಖೆ ಚುನಾವಣಾಧಿಕಾರಿಯಾಗಿದ್ದಾರೆ.
ಏಕೈಕ ನಾಮಪತ್ರ ಸಲ್ಲಿಕೆಯಾದ ಕಾರಣ ತಮ್ಮ ಅವಿರೋಧ ಆಯ್ಕೆಯ ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ ಎಂದು ವಿಜಯಕುಮಾರ ಆನಂದೆ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ಸಂತಸ ಉಂಟು ಮಾಡಿದೆ ಎಂದು ಹೇಳಿದ್ದಾರೆ.
ಮಂಡಳಿಯಿಂದ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಶಕ್ತಿಮೀರಿ ಪ್ರಯತ್ನಿಸಲಾಗುವುದು. ರೈತರ ಹಿತರಕ್ಷಣೆಗೆ ಶ್ರಮಿಸಲಾಗುವುದು ಎಂದು ತಿಳಿಸಿದ್ದಾರೆ.