ವಿಜಡಮ್ ಲ್ಯಾಂಡ್ ಶಾಲೆಯ   ವಿದ್ಯಾರ್ಥಿಗಳು ರಾಜ್ಯ-ರಾಷ್ಟ್ರಮಟ್ಟಕ್ಕೆ  ಆಯ್ಕೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.18: ನಗರದ ವಿಜಡಮ್ ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದಾಗಿ ಶಾಲೆಯ ಮುಖ್ಯಸ್ಥ ಎಸ್.ವೈ. ಕಟ್ಟೆಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ನಂದನ್‌ ಎಂಬ ವಿದ್ಯಾರ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ  ಬೆಂಗಳೂರಿನ ಆನೆಕಲ್ಲಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ  ಕ್ರೀಡಾಕೂಟದಲ್ಲಿ ಚದುರಂಗ ಪಂದ್ಯಾವಳಿಯಲ್ಲಿ ಭಾಗವಹಿಸಿ ಒಂಬತ್ತು ಸುತ್ತುಗಳಲ್ಲಿ ಏಳರಲ್ಲಿ ಜಯ ಸಾಧಿಸಿ, ಒಂದರಲ್ಲಿ ಡ್ರಾ ಆಗುವ ಮೂಲಕ ಅತ್ಯುತ್ತಮ ಸಾಧನೆ ತೋರಿ ನಾಲ್ಕನೇ ಸ್ಥಾನವನ್ನು ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಮುಂದಿನ ನವೆಂಬರ್‌ ತಿಂಗಳಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ನಡೆಯುವ ಸ್ಕೂಲ್‌ ಗೇಮ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ ಆಯೋಜಿಸಿರುವ ರಾಷ್ಟ್ರಮಟ್ಟದ ಚದುರಂಗ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾನೆ.
 ರಾಜ್ಯ ಮಟ್ಟಕ್ಕೆ:
ಬಳ್ಳಾರಿಯ ವಿಮ್ಸ್‌ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಡದಲ್ಲಿ ಭಾಗವಹಿಸಿದ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿ ಡಿ.ಶಂಕರ್‌ 1500 ಮೀಟರ್‌ ಓಟದ ಸ್ಪರ್ಧೆಯಲ್ಲಿ,  ಹತ್ತನೇ ತರಗತಿ ವಿದ್ಯಾರ್ಥಿ ಯು.ನಾಗರಾಜ್‌ ಹ್ಯಾಮರ್‌ ಥ್ರೋನಲ್ಲಿ  ದ್ವಿತೀಯ ಸ್ಥಾನವನ್ನು ಪಡೆದರೆ.   ಏಳನೇ ತರಗತಿ ವಿದ್ಯಾರ್ಥಿ ಉದಯ್‌ಕುಮಾರ್‌ ಹೈಜಂಪ್‌ನಲ್ಲಿ ಪ್ರಥಮ ಸ್ಥಾನವನ್ನು ಹಾಗೂ ಆರನೇ ತರಗತಿ ವಿದ್ಯಾರ್ಥಿನಿಯರಾದ ದೀಕ್ಷ ಮತ್ತು ಪ್ರಾರ್ಥನ  ಟೇಬಲ್‌ ಟೆನಿಸ್‌ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದು  ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
 ಇವರ ಸಾಧನೆಯನ್ನು ಶಾಲೆಯ   ಮುಖ್ಯಸ್ಥ  ಎಸ್.ವೈ.ಕಟ್ಟೇಗೌಡ, ದೈಹಿಕ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಶ್ಲಾಘಿಸಿದ್ದಾರೆ.