ವಿಗ್ರಹ ಪ್ರತಿಷ್ಠಾಪನೆ: ಕ್ರಮಕ್ಕೆ ಒತ್ತಾಯ

ಕುಣಿಗಲ್, ನ. ೨೧- ಬಿದನಗೆರೆ ಬಸವೇಶ್ವರ ಮಠ ಮತ್ತು ಶ್ರೀ ಸತ್ಯ ಶನೇಶ್ವರ ಪುಣ್ಯಕ್ಷೇತ್ರದ ಗುರುಗಳಾದ ಧನಂಜಯ ಸ್ವಾಮೀಜಿಯವರನ್ನು ತಾಲ್ಲೂಕಿನಿಂದ ಗಡಿಪಾರು ಮಾಡಬೇಕು ಎಂದು ಕರ್ನಾಟಕ ಕನ್ನಡ ಪರ ಸಂಘಟನೆಗಳ ಒಕ್ಕೂಟ ಹಾಗೂ ಕರುನಾಡ ಹೊಯ್ಸಳ ಸೇನೆಯ ರಾಜ್ಯಾಧ್ಯಕ್ಷರಾದ ಎಂ. ಪುಟ್ಟೇಗೌಡ ಒತ್ತಾಯಿಸಿದರು
ಪಟ್ಟಣದ ತಾಲ್ಲೂಕು ಕಚೇರಿಯ ಅವರಣದಲ್ಲಿ ಕರ್ನಾಟಕ ಕನ್ನಡ ಪರ ಸಂಘಟನೆಗಳ ಒಕ್ಕೂಟ ಮತ್ತು ಕರುನಾಡ ಹೊಯ್ಸಳ ಸೇನೆಯ ಬೆಂಗಳೂರು ಇವರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಬಿದನಗೆರೆ ಬಸವೇಶ್ವರ ಮಠ ಹಾಗೂ ಶ್ರೀ ಸತ್ಯ ಶನೇಶ್ವರ ಪುಣ್ಯಕ್ಷೇತ್ರದ ಗುರುಗಳಾದ ಧನಂಜಯ ಸ್ವಾಮೀಜಿಗಳ ವಿರುದ್ಧ ಪ್ರತಿಭಟನೆ ನಡೆಸಿ ಸರ್ಕಾರದಿಂದ ಯಾವುದೇ ಅನುಮತಿ, ಪ್ರಾಧಿಕಾರದಿಂದ ಪರವಾನಿಗೆ ಪಡೆಯದೆ ಕಾನೂನು ಬಾಹಿರವಾಗಿ ಕೃಷಿ ಭೂಮಿಯಲ್ಲಿ ೧೫೧ ಅಡಿ ಪಂಚಮುಖಿ ಆಂಜನೇಯ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಬಸವೇಶ್ವರ ಮಠವನ್ನು ನಡೆಸುತ್ತಾ ಭಕ್ತರಿಗೆ ಮೋಸ ಮಾಡುತ್ತಿದ್ದಾರೆ. ಪೂಜೆ ಹೋಮ ಹವನದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದಾರೆ. ಗುರುಗಳಿಗೆ ಸಂಸ್ಕೃತ ಪಾಂಡಿತ್ಯ ವೇದ ಉಪನ್ಯಾಸಗಳು ದೈವಿಕತೆಯ ಜ್ಞಾನ ಇಲ್ಲದೆ ಕಾನೂನು ಬಾಹಿರವಾಗಿ ಸರ್ಕಾರ ನಿಷೇಧಿಸಿರುವ ಅಂಜನ ವಾಮಾಚಾರ ಶಿಷ್ಟಾಚಾರ ಹೆಸರಿನಲ್ಲಿ ಭಕ್ತರಿಗೆ ವಂಚಿಸಿದ್ದು, ಸಂಸ್ಥೆಯ ಹೆಸರಿನಲ್ಲಿ ದುರುಪಯೋಗಪಡಿಸಿಕೊಂಡು ಗೋಲ್ಡನ್ ಬಾಬಾ ಎಂಬ ಹೆಸರಿನಿಂದ ವಂಚಿಸುತ್ತಿದ್ದಾರೆ. ಮಠದ ಆಸ್ತಿ ಗುರುಗಳ ಆಸ್ತಿ ಕೂಡಲೇ ಜಪ್ತಿ ಮಾಡಿ ಗುರುಗಳನ್ನು ಬಂಧಿಸಬೇಕು. ಐಟಿ ಮತ್ತು ಇಡಿ ಪ್ರಕರಣಗಳನ್ನು ವರ್ಗಾವಣೆ ಮಾಡಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.
ಮಠದ ಹೆಸರಿನಲ್ಲಿ ಭಕ್ತರಿಗೆ ವಂಚಿಸಿ ಕೋಟ್ಯಂತರ ರೂಪಾಯಿ ಸಂಪಾದಿಸಿ ಮೋಸ ಮಾಡುತ್ತಿರುವವರನ್ನು ಕೂಡಲೇ ತಾಲ್ಲೂಕಿನಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸುತ್ತಾ ಸಾಮಾಜಿಕ ಜಾಲತಾಣಗಳಿಂದ ಜಾಗೃತಿ ಮೂಡಿಸಬೇಕು. ಭಕ್ತರು ಮಠಕ್ಕೆ ಹೋಗಿ ಮೋಸ ಹೋಗದಂತೆ ಅರಿವು ಮೂಡಿಸಬೇಕು ಎಂದು ಒತ್ತಾಯಿಸಿದರು
ಕರುನಾಡು ಹೊಯ್ಸಳ ಸೇನೆಯ ಕಿರಣ್‌ಕುಮಾರ್, ಬಿಆರ್ ಕರ್ನಾಟಕ ಪ್ರಜಾ ಸೇವಾ ಸಮಿತಿ ರಾಜ್ಯಾಧ್ಯಕ್ಷ ಮಂಜುನಾಥ್ ಹಾಗೂ ಹೊಯ್ಸಳ ಸೇನೆಯ ಮಂಜುನಾಥ್ ಗೌಡ ಪ್ರತಿಭಟನೆಯಲ್ಲಿ ಭಾಗವಹಿಸಿ ತಹಶೀಲ್ದಾರ್ ವಿಶ್ವನಾಥ್ ರವರಿಗೆ ಮನವಿ ಸಲ್ಲಿಸಿದರು.