-ವಿಶೇಷ ವರದಿ
ಬೆಂಗಳೂರು, ಏ.೧೨- ಸುಡುವ ಬಿಸಿಲಿನಲ್ಲೇ ಪಾದಚಾರಿ ಮಾರ್ಗಗಳಲ್ಲೇ ವಿಶ್ರಾಂತಿ. ದಿನಗಟ್ಟಲೇ ಮನೆಯ ಮುಖ ನೋಡದೆ, ಅಸಹಾಯಕರಂತೆ ಕುಳಿತಿರುವ ಜನ..! ನೀರು, ನೆರಳು ಪಡೆಯಲು ಇಲ್ಲಿ ಪೈಪೋಟಿ..! ಇದು ರಾಜಧಾನಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಬಳಿ ಕಂಡು ಬರುವ ತಾಜಾ ದೃಶ್ಯ.ಈಗ ನೆತ್ತಿಸುಡುವ ಬಿಸಿಲು ಬೇರೆ.ಆಶ್ರಯ ಪಡೆಯಲು ರೋಗಿಗಳ ಸಂಬಂಧಿಕರ ಗೋಳು ಹೇಳತೀರದಾಗಿದೆ.
ಪ್ರತಿನಿತ್ಯ ೨ ಸಾವಿರಕ್ಕೂ ಅಧಿಕ ರೋಗಿಗಳು ರಾಜ್ಯದ ವಿವಿಧೆಡೆಯಿಂದ ಸಿಲಿಕಾನ್ ಸಿಟಿಯಲ್ಲಿನ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಅಡಿ ವಿಕ್ಟೋರಿಯಾ, ವಾಣಿವಿಲಾಸ, ಮಿಂಟೊ, ಟ್ರಾಮಾ ಕೇರ್ ಕೇಂದ್ರ, ನೆಫ್ರೊಯೂರಾಲಜಿ ಸಂಸ್ಥೆ, ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಆಸ್ಪತ್ರೆ ಹಾಗೂ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೊಎಂಟ್ರಾಲಜಿ ಸೈನ್ಸಸ್ ಆಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು ಬರುತ್ತಾರೆ.
ಆದರೆ, ವಿಕ್ಟೋರಿಯಾ ಸಂಕೀರ್ಣದಲ್ಲಿ ರೋಗಿಗಳ ಕಡೆಯವರಿಗೆ ವಿಶ್ರಾಂತಿಗೆ ಸೂಕ್ತ ವ್ಯವಸ್ಥೆಯಿಲ್ಲದೆ, ಪಾದಚಾರಿ ಮಾರ್ಗಗಳನ್ನೇ ವಿಶ್ರಾಂತಿ ತಾಣವಾಗಿ ಬಳಸಬೇಕಾದ ಅನಿವಾರ್‍ಯ ಪರಿಸ್ಥಿತಿ ಎದುರಾಗಿದೆ.
ಅದರಲ್ಲೂ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಇಲ್ಲಿಗೆ ರೋಗಿಗಳು ಚಿಕಿತ್ಸೆಗೆ ಬರಲಾರಂಭಿಸಿದ್ದಾರೆ. ರೋಗಿಯ ಕಡೆಯವರಿಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಆಸ್ಪತ್ರೆಗಳ ಆವರಣ ಹಾಗೂ ಪಾರ್ಕಿಂಗ್ ಸ್ಥಳದಲ್ಲಿಯೇ ಮಲಗುವ ದಯನೀಯ ಸ್ಥಿತಿ ತಲೆದೋರಿದೆ.
ವಿಕ್ಟೋರಿಯಾ ಸಂಕೀರ್ಣದಲ್ಲಿ ವಾಹನಗಳ ನಿಲುಗಡೆಗೂ ಸೂಕ್ತ ವ್ಯವಸ್ಥೆಯಿಲ್ಲ. ಹೀಗಾಗಿ, ಕೆಲವರು ರಸ್ತೆಯ ಅಕ್ಕಪಕ್ಕದಲ್ಲಿಯೇ ವಾಹನ ನಿಲ್ಲಿಸಿ, ತೆರಳುತ್ತಿದ್ದಾರೆ. ಇದರಿಂದಾಗಿ ರೋಗಿಗಳನ್ನು ಕರೆದೊಯ್ಯುವಾಗ ಅವರ ಸಂಬಂಧಿಗಳು ಸಮಸ್ಯೆ ಎದುರಿಸುವಂತಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕೊಳ್ಳೆಗಾಲದ ರಾಮಸಂದ್ರ ಗ್ರಾಮದ ನಾರಾಯಣಪ್ಪ, ಮಗನನ್ನು ಆಸ್ಪತ್ರೆಗೆ ದಾಖಲಿಸಿ ಎರಡು ವಾರಗಳಾಗಿವೆ. ರೋಗಿಯ ಜತೆಗೆ ಒಬ್ಬರಿಗೆ ಮಾತ್ರ ಇರಲು ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ರಸ್ತೆಯಲ್ಲಿಯೇ ದಿನ ಕಳೆಯುತ್ತಿದ್ದೇನೆ ಎಂದರು.
ಶ್ರೀನಿವಾಸಪುರದ ರಾಮರೆಡ್ಡಿ ಮಾತನಾಡಿ, ಆಸ್ಪತ್ರೆಯ ಕ್ಯಾಂಟೀನ್‌ನಲ್ಲಿ ಊಟತಿಂಡಿಯ ದರ ಕಡಿಮೆ ಇದ್ದರೂ ಗುಣಮಟ್ಟ ಇಲ್ಲ. ಬಿಸಿ ನೀರು ಸಿಗುತ್ತಿಲ್ಲ. ರೋಗಿಗಳ ಕಡೆಯವರಿಗೆ ಉಳಿಯಲು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಹೀಗೆ,ಪ್ರತಿಯೊಬ್ಬ ರೋಗಿಯ ಸಂಬಂಧಿಕರು ಪ್ರತಿನಿತ್ಯ ವಾಸ್ತವ್ಯ ಹೂಡಲು ಸೂಕ್ತ ವ್ಯವಸ್ಥೆ ಇಲ್ಲದೆ ಪರದಾಟ ನಡೆಸುತ್ತಿದ್ದಾರೆ. ಬೆಂಗಳೂರು ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಪರಿಸ್ಥಿತಿ ಕಂಡುಬರುತ್ತಿದೆ. ಸರ್ಕಾರ, ಅಲ್ಲಿನ ಆಡಳಿತ ಮಂಡಳಿ ಸೂಕ್ತ ಮೂಲಸೌಕರ್ಯ ಒದಗಿಸಲಿ ಎನ್ನುವುದು ಅನೇಕರ ಒತ್ತಾಯ.
ವಿಕ್ಟೋರಿಯಾ ಆಸ್ಪತ್ರೆ ಇತಿಹಾಸ..!
೧೮೯೭ರ ಜೂನ್ ೨೨ ರಂದು ವಿಕ್ಟೋರಿಯಾ ರಾಣಿಯ ೬೦ ವರ್ಷಗಳ ಆಳ್ವಿಕೆಯ ಸವಿನೆನಪಿಗಾಗಿ ವಿಕ್ಟೋರಿಯಾ ಆಸ್ಪತ್ರೆ ನಿರ್ಮಿಸಲಾಗಿದೆ. ಮೈಸೂರಿನ ಅಂದಿನ ಮಹಾರಾಣಿ ರಾಜಪ್ರತಿನಿಧಿ
ಕೆಂಪನಂಜಮ್ಮಣ್ಣಿ ಅವರು ಇದರ ರೂವಾರಿ.
೧೯೦೦ರ ಡಿಸೆಂಬರ್ ೮ರಂದು ಅಂದಿನ ವೈಸ್‌ರಾಯ್ ಲಾರ್ಡ್ ಕರ್ಜನ್ ಅವರು ಆಸ್ಪತ್ರೆಯನ್ನು ಉದ್ಘಾಟಿಸಿದ್ದರು. ಆಗ ೧೪೦ ಹಾಸಿಗೆಗಳನ್ನು ಈ ಆಸ್ಪತ್ರೆ ಒಳಗೊಂಡಿತ್ತು. ನರವಿಜ್ಞಾನ, ಮನೋವಿಜ್ಞಾನ, ಹೃದ್ರೋಗ ಸೇರಿದಂತೆ ವಿಭಾಗಗಳು ಆಸ್ಪತ್ರೆಯಲ್ಲಿವೆ. ಎಕ್ಸ್?ರೆ, ಸಿ.ಟಿ ಸ್ಕ್ಯಾನ್ ಸೇರಿದಂತೆ ವಿವಿಧ ಪರೀಕ್ಷೆಗಳು ಇಲ್ಲಿ ಲಭ್ಯ. ದೇಶದ ಅತೀ ದೊಡ್ಡ ಆಸ್ಪತ್ರೆಗಳಲ್ಲಿ ವಿಕ್ಟೋರಿಯಾ ಕೂಡ ಒಂದು.
ದಾಖಲಾತಿ ವಿಳಂಬವೇ ಪ್ರಮುಖ ಕಾರಣ..!
ಆಸ್ಪತ್ರೆಗೆ ದಾಖಲಾಗಬೇಕಾದಲ್ಲಿ ದಿನವಿಡೀ ಕಾಯಬೇಕಾಗುತ್ತದೆ. ತುರ್ತು ಚಿಕಿತ್ಸೆ ಅಗತ್ಯವಿದ್ದರೆ ಮಾತ್ರ ಕೂಡಲೆ ದಾಖಲಿಸಿಕೊಳ್ಳುತ್ತಾರೆ. ಸ್ಕ್ಯಾನಿಂಗ್ ಸೇರಿದಂತೆವಿವಿಧ ಪರೀಕ್ಷೆಗಳು ವಿಳಂಬವಾಗುತ್ತಿವೆ. ಹೀಗಾಗಿ, ಖಾಸಗಿ ಪ್ರಯೋಗಾಲಯಗಳಿಗೆ ತೆರಳಬೇಕಾದ ಪರಿಸ್ಥಿತಿಯಿದೆ. ವಾರ್ಡ್‌ಗಳಿಗೆ ಬರುವ ಸಿಬ್ಬಂದಿ ಅನಗತ್ಯವಾಗಿ ರೇಗಾಡುತ್ತಾರೆ. ವೈದ್ಯರು ಉತ್ತಮವಾಗಿ ಚಿಕಿತ್ಸೆ ಒದಗಿಸುತ್ತಿದ್ದಾರೆ ಎನ್ನುವುದು ರೋಗಿಗಳ ಅಭಿಮತ.