ವಿಕೆಂಡ್ ಕರ್ಫ್ಯೂನಲ್ಲಿ ಸಂಕ್ರಾಂತಿ ತಯಾರಿ


ದಾವಣಗೆರೆ, ಜ.14: ನಾಳೆ ಸಂಕ್ರಾಂತಿ ಹಬ್ಬ. ಇನ್ನೂ ಒಂದು ದಿನ ಬಾಕಿ ಉಳಿದಿದ್ದು, ಹಬ್ಬದ ತಯಾರಿ ಜೋರಾಗಿ ನಡೆಯುತ್ತಿದೆ.ಈ ಹಿನ್ನಲೆಯಲ್ಲಿ ಜನರು ಖರೀದಿಗೆ ಮುಂದಾಗಿದ್ದಾರೆ. ಕಬ್ಬಿನ ಜಲ್ಲೆ, ಸಿದ್ಧ ಎಳ್ಳು-ಬೆಲ್ಲ, ಸಕ್ಕರೆ ಅಚ್ಚು ಖರೀದಿ ಭರಾಟೆ ಆರಂಭವಾಗಿದೆ.ಈ ಬಾರಿ ಹಬ್ಬದ ಆಚರಣೆಗೆ ವೀಕೆಂಡ್ ಕರ್ಫ್ಯೂ ಅಡ್ಡಿಯಾಗಲಿದೆ. ಆದರೂ ಮನೆ- ಮನೆಗಳಲ್ಲಿ ಹಬ್ಬವನ್ನು ಆಚರಿಸಿಕೊಳ್ಳಲು ಜನ ಸಜ್ಜಾಗಿದ್ದಾರೆ.ನಗರದ ಕೆ.ಆರ್. ಮಾರುಕಟ್ಟೆ, ಗಡಿಯಾರ ಕಂಬ, ವಿಜಯಲಕ್ಷ್ಮಿ ರಸ್ತೆ, ಬಸವರಾಜ ಪೇಟೆ ಸೇರಿದಂತೆ ಮಾರುಕಟ್ಟೆ ಪ್ರದೇಶದಲ್ಲಿ ಜನರು ಖರೀದಿಗೆ ಮುಂದಾಗಿದ್ದಾರೆ. ಇದರಿಂದ ಅಂಗಡಿಗಳ ಮುಂದೆ ಸ್ವಲ್ಪಮಟ್ಟಿಗೆ ಜನಸಂದಣಿ ಕಂಡು ಬಂದಿತು.
ಇನ್ನೂ ಮಾರುಕಟ್ಟೆ ಪ್ರದೇಶದಲ್ಲದೇ ಪ್ರಮುಖ ವೃತ್ತಗಳಲ್ಲಿ ಲೋಡ್‌ಗಟ್ಟಲೆ ಕಬ್ಬು ಬಂದಿದೆ. ಹೇಳಿ ಕೇಳಿ ಸಂಕ್ರಾಂತಿ ಹಬ್ಬಕ್ಕೆ ಕಬ್ಬು ಬಹುಬೇಡಿಕೆಯುಳ್ಳದ್ದಾಗಿದೆ.
ಈ ಬಾರಿ ಕಬ್ಬು ಬೆಳೆ ಉತ್ತಮವಾಗಿದೆ. ಸಂಕ್ರಾಂತಿಗೆ ಕಬ್ಬು ತಂದು ಮಾರಾಟ ಮಾಡುತ್ತೇವೆ. ಈ ಬಾರಿಯೂ ವಿಕೆಂಡ್ ಕರ್ಫ್ಯೂ ಇರುವುದರಿಂದ ವಹಿವಾಟು ಅಷ್ಟಾಗಿ ಆಗುವುದಿಲ್ಲ ಎಂದು ಕಬ್ಬಿನ ವ್ಯಾಪಾರಿಯ ಅಳಲಾಗಿತ್ತು.ಮಾರುಕಟ್ಟೆಯಲ್ಲಿ ಸಿದ್ಧ ಎಳ್ಳು-ಬೆಲ್ಲ ಕೆ.ಜಿ.ಗೆ 180-200 ರೂ.ಗೆ ಮಾರಾಟವಾಗುತ್ತಿದೆ. ಸಂಕ್ರಾಂತಿಗೆ ಎಳ್ಳು, ಬೆಲ್ಲ, ಒಣ ಕೊಬ್ಬರಿ, ಕಡ್ಲೆಬೀಜ, ಹುರಿಗಡಲೆಗಳ ಮಿಶ್ರಣ, ಕಬ್ಬು, ಸಕ್ಕರೆ ಅಚ್ಚುಗಳೂ ಬಂದಿವೆ.ಅಂದ ಹಾಗೆ ಶನಿವಾರ ಸಂಕ್ರಾಂತಿ ಹಬ್ಬ. ಆದರೆ ವಾರಾಂತ್ಯದಲ್ಲಿ ಸರಕಾರ ಕರ್ಫ್ಯೂ ವಿಧಿಸಿರುವುದರಿಂದ ಹಬ್ಬದ ಆಚರಣೆಗೆ ತೊಡಕಾಗುವ ಸಾಧ್ಯತೆಯಿದೆ. ಮಾರಾಟಗಾರರು ಹಬ್ಬದ ಸಾಮಗ್ರಿಗಳನ್ನು ಖರೀದಿಸಿ ತಂದರೆ, ಅಂದು ವ್ಯಾಪಾರಕ್ಕೆ ಅವಕಾಶ ಸಿಕ್ಕಿದರೂ ಕೂಡ ಗ್ರಾಹಕರು ಬರಬೇಕಲ್ಲವೇ ಎಂಬುದು ವ್ಯಾಪಾರಿಗಳ ಆತಂಕವಾಗಿದೆ.