ವಿಕೃತ ಕಾಮಿಗೆ ಗುಂಡೇಟು

ಬೆಂಗಳೂರು, ಜೂ.೨- ಬಾಂಗ್ಲಾ ಯುವತಿಯ ಗುಪ್ತಾಂಗದೊಳಗೆ ಮದ್ಯದ ಬಾಟಲಿ ಹಾಗೂ ಕಾಲ್ಬೆರಳು ತುರುಕಿ ಮೃಗೀಯವಾಗಿ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಗೆ ಪೂರ್ವ ವಿಭಾಗದ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಪೊಲೀಸರ ಗುಂಡೇಟು ಕಾಲಿಗೆ ಗಾಯಗೊಂಡ ಪ್ರಮುಖ ಆರೋಪಿ ಬಾಂಗ್ಲಾ ಮೂಲದ ಶೂಬೂಜ್ ಅಲಿಯಾಸ್ ಮಹಮ್ಮದ್ ಶೇಖ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ
ಕೆಆರ್ ಪುರಂ ಬಳಿಯ ರಾಂಪುರ ಕೆರೆ ಬಳಿ ಇಂದು ಬೆಳಿಗ್ಗೆ ಕಾರ್ಯಾಚರಣೆ ನಡೆಸಿ ಗುಂಡು ಹಾರಿಸಿ ಬಂಧಿಸಲಾಗಿದೆ ಆರೋಪಿ ಶೂಬೂಜ್ ಯುವತಿಯ ಗುಪ್ತಾಂಗಕ್ಕೆ ಕಾಲಲ್ಲಿ ಒದ್ದು, ವಿಕೃತಿ ಮೆರೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಕ್ಕಿಬಿದ್ದಿದ್ದು ಹೇಗೆ:
ಮೃಗೀಯ ಅತ್ಯಾಚಾರದ ಆರೋಪಿ ಶೂಬೂಜ್ ಪೇಪರ್ ಆಯುವವರ ಶೆಡ್ ನಲ್ಲಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದು ಜೀಪಿನಲ್ಲಿ ಕರೆ ತರುತ್ತಿದ್ದರು.
ಈ ವೇಳೆ ಮೂತ್ರ ವಿಸರ್ಜನೆಯ ನೆಪ ಮಾಡಿ ಜೀಪ್ ಒಳಗಡೆಯೇ ಮೂತ್ರ ಮಾಡುತ್ತೇನೆ ಎಂದು ಪೊಲೀಸರಿಗೆ ಬೆದರಿಸಿದಾಗ ಅನಿರ್ವಾಯವಾಗಿ ಆತನನ್ನು ಜೀಪಿನಿಂದ ಕೆಳಗಡೆ ಇಳಿಸಿದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಆತನನ್ನು ಬೆನ್ನಟ್ಟಿ ಹಿಡಿಯಲು ಹಿಂದೆ ಹೋದ ಪೊಲೀಸ್ ಮುಖ್ಯಪೇದೆ ದೇವೇಂದರ್ ನಾಯಕ್ ಮತ್ತು ಸಬ್ ಇನ್ಸ್ ಪೆಕ್ಟರ್ ಶಿವರಾಜ್ ಅವರಿಗೆ ಚಾಕುವಿನಿಂದ ಇರಿದಿದ್ದಾನೆ.
ಚಾಕು ಎಸೆದು ಶರಣಾಗುವಂತೆ ಗಾಳಿಯಲ್ಲಿ ಪಿಎಸ್‌ಐ ಶಿವರಾಜ್ ಒಂದು ಸುತ್ತು ಗುಂಡು ಹಾರಿಸಿ ಸೂಚನೆ ನೀಡಿದರೂ ದೇವೇಂದರ್ ನಾಯಕ್ ಬಲಗೈಗೆ ಮತ್ತು ಶಿವರಾಜ್ ಎಡಗೈಗೆ ಗಾಯ ಮಾಡಿದಾಗ ಮತ್ತೊಂದು ಸುತ್ತು ಗುಂಡು ಹಾರಿಸಿದ್ದು ಅದು ಎಡಗಾಲಿಗೆ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದು ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಯು ನಡೆಸಿದ ಹಲ್ಲೆಯಿಂದ ಗಾಯಗೊಂಡ ಮುಖ್ಯಪೇದೆ ದೇವೇಂದರ್ ನಾಯಕ್ ಮತ್ತು ಸಬ್ ಇನ್ಸ್ ಪೆಕ್ಟರ್ ಶಿವರಾಜ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಡಿಸಿಪಿ ಶರಣಪ್ಪ ತಿಳಿಸಿದರು.
೧೦ ಮಂದಿ ಸೆರೆ:
ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಇಲ್ಲಿಯವರೆಗೆ ಒಟ್ಟು ೧೦ ಜನ ಆರೋಪಿಗಳ ಬಂಧನವಾಗಿದೆ. ಮೇ ೨೭ ರಂದು ೬ ಜನ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿತ್ತು. ರಿದಯ್ ಬಾಬು, ರಕಿಬುಲ್ ಇಸ್ಲಾಂ, ಸಾಗರ್, ಮೊಹಮ್ಮದ್ ಬಾಬು ಶೇಕ್, ಅಕಿಲ್, ಇಬ್ಬರು ಮಹಿಳಾ ಆರೋಪಿಗಳಾದ ಕಾಜಲ್, ನಸ್ರತ್ ಅವರನ್ನು ಬಂಧಿಸಲಾಗಿತ್ತು. ಇವರ ಮಾಹಿತಿ ಮೇರೆಗೆ ನಿನ್ನೆ ರಫ್ಸನ್, ರಫ್ಸನ್ ಪತ್ನಿ ತಾನ್ಯಾ ಮತ್ತು ದಾಲೀಮ್ ಬಂಧಿಸಿ ವಿಚಾರಣೆ ನಡೆಸಲಾಗಿದೆ.