ವಿಕಾಸ ಬ್ಯಾಂಕ್‍ನ 25 ನೇ ವಾರ್ಷಿಕ ಮಹಾಸಭೆ ಬ್ಯಾಂಕ್ ಸಿಬ್ಬಂದಿಗಳನ್ನು ಕೋವಿಡ್ ವಾರಿಯರ್ಸ್ ಎಂದು ಗುರುತಿಸಿ: ವಿಶ್ವನಾಥ ಹಿರೇಮಠ.

ಬಳ್ಳಾರಿ ಡಿ 26 : ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಬ್ಯಾಂಕ್ ಸೇವೆ ಎಲ್ಲೂ ಸ್ವಲ್ಪವೂ ವ್ಯತ್ಯಯವಾಗದಂತೆ ಸೇವೆ ನೀಡಿದ ಬ್ಯಾಂಕ್ ಸಿಬ್ಬಂದಿಗಳು ಸಹ ಕೋವಿಡ್ ವಾರಿಯರ್ಸ್ ಎಂದು ಗುರುತಿಸದಿರುವುದು ಖೇದಕರ ಎಂದು ವಿಕಾಸ ಬ್ಯಾಂಕ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿಯ ನಿರ್ದೇಶಕ ವಿಶ್ವನಾಥ ಹಿರೇಮಠ ಹೇಳಿದರು.
ಜಿಲ್ಲೆಯ ಹೊಸಪೇಟೆ ನಗರದ ಮಲ್ಲಿಗೆ ಸಭಾಂಗಣದಲ್ಲಿ ನಿನ್ನೆ ನಡೆದ 25ನೇ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿದ ಅವರು ಕೋವಿಡ್ ಅವಧಿಯಲ್ಲಿ ವಿಕಾಸ ಬ್ಯಾಂಕ್ ಸೇರಿದಂತೆ ಬ್ಯಾಂಕಿಂಗ್ ಸೇವೆ ಸಲ್ಲಿಸಿದ ಬ್ಯಾಂಕ್ ಸಿಬ್ಬಂದಿಗಳ ಸೇವೆಯನ್ನು ಸ್ಮರಿಸಿ ಶ್ಲಾಘಿಸಿದರು. ಬ್ಯಾಂಕ್ ತಾನು ಮಾತ್ರವಲ್ಲ ತನ್ನ ಸುತ್ತಲ ಸಹಕಾರಿ ಸಂಸ್ಥೆಗಳ ಬೆಳವಣಿಗೆಯನ್ನು ಬಯಸುವ ಜೊತೆ ಕಾರ್ಯನಿರ್ವಹಿಸುತ್ತಾ ರಾಜ್ಯದಲ್ಲಿಯೇ ಮಾದರಿ ಬ್ಯಾಂಕ್ ಆಗಿ ರೂಪುಗೊಂಡಿದೆ ಎಂದರು. ಸಾಮಾಜಿಕ ಹೊಣೆಗಾರಿಕೆಯಂತೆ ಕರೋನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸಿದ ಹೊಸಪೇಟೆ ತಾಲೂಕು ಆಶಾ ಕಾರ್ಯಕರ್ತೆಯರಿಗೆ ಸರ್ಕಾರದ ಪರವಾಗಿ 105 ಸಿಬ್ಬಂದಿಗೆ 3.16 ಲಕ್ಷ ಹಣವನ್ನು ಬ್ಯಾಂಕ್‍ವತಿಯಿಂದ ದೇಣಿಗೆ ನೀಡಿದ್ದನ್ನು ಸಹ ಸ್ಮರಿಸಿದರು.
ಭಾರತೀಯ ರೀಜರ್ವ್ ಬ್ಯಾಂಕ್ ಆದೇಶದಂತೆ ಈ ಭಾರಿ ಉತ್ತಮ ಲಾಭಗಳಿಸಿದ್ದರೂ ತನ್ನ ಸದಸ್ಯರಿಗೆ ಲಾಭಾಂಶವನ್ನು ನೀಡದಿರಲು ತೀರ್ಮಾನಿಸಿದೆ ಎಂದ ಅವರು ಮುಂದಿನ ವರ್ಷ 25ನೇ ವರ್ಷಾಚರಣೆಗೆ ಪಾದಾಪರ್ಣೆ ಮಾಡಲಿದ್ದು ವಿಶಿಷ್ಠ ಹಾಗೂ ವಿನೂತನ ಕಾರ್ಯಕ್ರಮಗಳೊಂದಿಗೆ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಮಾಡಲಿದೆ ಎಂದರು
ಕೋವಿಡ್ ವಾರಿಯರ್ಸ್‍ನಂತೆ ಕಾರ್ಯನಿರ್ವಹಿಸಿದ ಬ್ಯಾಂಕ್ ಸಿಬ್ಬಂದಿಗಳ ಪರವಾಗಿ 7 ಶಾಖೆಗಳ ವ್ಯವಸ್ಥಾಪಕರು ದೀಪಬೆಳಗುವ ಮೂಲಕ ವಾರ್ಷಿ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿದರು. ಎಲ್ಲಾ ಹಂತಗಳ ಕೆಲಸದಲ್ಲಿ ಉತ್ತಮ ಸಾಧನೆ ತೋರಿದ ಬಳ್ಳಾರಿ ಶಾಖೆ 20019/20 ಸಾಲಿನ ಅತ್ಯುತ್ತಮ ಶಾಖೆ ಎಂದು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಕಾಸ ಯುವಕ ಮಂಡಳಿಯ ಅಧ್ಯಕ್ಷ ಜಿ.ಬಸವರಾಜ್ ಅತಿಥಿಗಳಾಗಿ ಪಾಲ್ಗೊಂಡಿದ್ದರು, ಆಡಳಿತ ಮಂಡಳಿಯ ನಿರ್ದೇಶಕರಾದ ಛಾಯಾದಿವಾಕರ್, ರಮೇಶ ಪುರೋಹಿತ್, ಅಮೃತ ಜೋಶಿ, ದೊಡ್ಡ ಬೋರಯ್ಯ, ರಾಜೇಶ್ ಹಿರೇಮಠ, ವಿಠೋಬಣ್ಣ, ಎಂ ವೆಂಕಪ್ಪ, ಮಲ್ಲಿಕಾರ್ಜುನ್ ಅಕ್ಕಿ, ಗಂಗಮ್ಮ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹಿರೇಮಠ ಉಪಸ್ಥಿತರಿದ್ದರು.