ವಿಕಸಿತ ವಿಜಯಪುರವಾಗಲು ರಾಜಕೀಯ ಇಚ್ಛಾಶಕ್ತಿ ಬೇಕು: ಡಾ. ಬಾಬು ರಾಜೇಂದ್ರ ನಾಯಿಕ

ವಿಜಯಪುರ,ಜ.20:ಜಿಲ್ಲಾ ಆಸ್ಪತ್ರೆಯಲ್ಲಿ 600 ಹಾಸಿಗೆಗಳ ಸೌಲಭ್ಯ, ಅತ್ಯುತ್ತಮ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು, ಸಿಟಿ ಸ್ಕ್ಯಾನ್, ಎಂಆರ್‍ಐನಂತಹ ಮೂಲಭೂತ ಸೌಲಭ್ಯಗಳಿದ್ದರೂ, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗದಿರುವುದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದು ಮಧುಮೇಹ ತಜ್ಞ, ವಿಜಯಪುರ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಆಕಾಂಕ್ಷಿ ಡಾ. ಬಾಬುರಾಜೇಂದ್ರ ನಾಯಿಕ ಅಭಿಪ್ರಾಯ ಪಟ್ಟರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಶುಕ್ರವಾರ ಆಯೋಜಿಸಲಾದ ‘ವಿಕಸಿತ ಭಾರತಕ್ಕಾಗಿ ವಿಕಸಿತ ವಿಜಯಪುರ’ ಎಂಬ ವಿಚಾರ ಗೋಷ್ಠಿಯಲ್ಲಿ ವಿಜಯಪುರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.

ವೈದ್ಯಕೀಯ ಕ್ಷೇತ್ರ ಜನರಿಗೆ ಲಭ್ಯವೂ, ಮಿತವ್ಯಯವೂ ಆಗಬೇಕು. ಆದರೆ ಮಧ್ಯಮ, ಬಡ ವರ್ಗದ ಜನರಿಗೆ ವೈದ್ಯಕೀಯ ಸೇವೆಗಳು ಗಗನ ಕುಸುಮವಾಗಿವೆ. ಇದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಎಲ್ಲ ಜನರಿಗೂ ಆರೋಗ್ಯ ವಿಮೆ ಲಭ್ಯವಾಗಬೇಕೆಂದು ಪ್ರಧಾನ ಮಂತ್ರಿ ಆರೋಗ್ಯ ವಿಮೆ ಜಾರಿಗೆ ತಂದಿದ್ದಾರೆ. ಅದನ್ನು ಪ್ರತಿಯೊಬ್ಬ ನಾಗರಿಕರಿಗೂ ತಲುಪಿಸುವ, ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.

ನಾನು ತಾಂಡಾದಲ್ಲಿ, ಅತ್ಯಂತ ಬಡಜನರ ಮಧ್ಯೆ ಜನಿಸಿ, ಬೆಳೆದವನು. ತೀವ್ರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿ, ಕಣ್ಣ ಮುಂದೆಯೇ ಜನರು ಪ್ರಾಣ ಕಳೆದುಕೊಳ್ಳುವುದನ್ನು ತಾನು ನೋಡಿದ್ದು, ಅಂತಹ ಸ್ಥಿತಿ ವಿಜಯಪುರದ ನಾಗರಿಕರಿಗೆ ಬರಬಾರದು. ಅದಕ್ಕಾಗಿ ನಾವೆಲ್ಲರೂ ವೈದ್ಯಕೀಯ ಕಾಲೇಜಿನ ಸ್ಥಾಪನೆಗಾಗಿ ಯಾವುದೇ ಲಾಬಿಗೆ ಮಣಿಯದೆ ಹೋರಾಡಬೇಕು. ಅದರೊಡನೆ, ಜಯದೇವ ಆಸ್ಪತ್ರೆಯ ಮಾದರಿಯಲ್ಲಿ ಸರ್ಕಾರಿ ಸಂಸ್ಥೆಗಳ ಸ್ಥಾಪನೆಯಾಗಬೇಕು ಎಂದು ಅವರು ಕರೆ ನೀಡಿದರು.

ಮೊದಲ ವಿಚಾರ ಗೋಷ್ಠಿ ಜಿಲ್ಲೆಯ ವೈದ್ಯಕೀಯ ಅಭಿವೃದ್ಧಿಯ ಕುರಿತು ಜರುಗಿದ್ದು, ತಜ್ಞ ವೈದ್ಯರಾದ ಡಾ. ಕಿರಣ್ ಓಸ್ವಾಲ್ ಮತ್ತು ಡಾ. ಸಂಜೀವ್ ಶಿಳ್ಳಿನ ಸಂವಾದ ನಡೆಸಿದರು.

ಡಾ. ಬಾಬು ರಾಜೇಂದ್ರ ನಾಯಿಕ್ ಅವರು ನಿಸ್ವಾರ್ಥವಾಗಿ 300ಕ್ಕೂ ಹೆಚ್ಚು ಮಧುಮೇಹಿ ಮಕ್ಕಳನ್ನು ವೈದ್ಯಕೀಯವಾಗಿ ದತ್ತು ಪಡೆದುಕೊಂಡು, ಅವರ ಚಿಕಿತ್ಸೆ, ಶಿಕ್ಷಣಕ್ಕೆ ನೆರವಾಗಿ, ಆತ್ಮವಿಶ್ವಾಸ ಮೂಡಿಸಿರುವುದಕ್ಕೆ ಡಾ. ಕಿರಣ್ ಮತ್ತು ಡಾ. ಸಂಜೀವ್ ಅವರು ಶ್ಲಾಘಿಸಿದರು. ಎರಡನೆಯ ಅವಧಿಯಲ್ಲಿ ಯುವಜನತೆ, ಶಿಕ್ಷಣ ಮತ್ತು ಕೌಶಲ್ಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು. ಈ ಸಂವಾದದಲ್ಲಿ ಅಜಿತ್ ಕುಲಕರ್ಣಿ ಮತ್ತು ಸುರೇಶ್ ಬಿಜಾಪುರ ಅವರು ಭಾಗವಹಿಸಿದರು.