ವಿಕಲ ಚೇತನರ ಮಾಸಾಶನ ಏರಿಕೆಗೆ ಪ್ರಾಮಾಣಿಕ ಪ್ರಯತ್ನ

ಮೈಸೂರು:ಮಾ:28: ಸರ್ಕಾರದಿಂದ ವಿಕಲ ಚೇತನರಿಗೆ ಹಾಲಿ ಪ್ರತಿ ಮಾಹೆ ನೀಡುತ್ತಿರುವ 1,400-5,000 ರೂ ವರೆಗೆ ಏರಿಸುವ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ವಿಚಾರ ವಿನಿಮಯ ಮಾಡುವುದಾಗಿ ಕಲ್ಬುರ್ಗಿಯ ಇಂದಿರಾಗಾಂಧಿ ಅಭಿಮಾನಿಗಳ ವೇದಿಕೆ ಅಧ್ಯಕ್ಷರಾದ ಜ್ಯೋತಿ.ಎಂ. ಮರಗೋಳ್ ತಿಳಿಸಿದರು.
ಇಂದು ಬೆಳಿಗ್ಗೆ ತಿಲಕನಗರದಲ್ಲಿರುವ ಶ್ರೀ ರಾಜಕುಮಾರಿ ದೊಡ್ಡಮ್ಮಣಿ ಆಶ್ರಮ (ಕರ್ನಾಟಕ ಕಿವುಡು ಸಂಘ ಮೈಸುರು)ದ ಸಭಾಂಗಣದಲ್ಲಿ ಕರ್ನಾಟಕ ಕಿವುಡು ಸಂಘದ 80ನೇ ವಾರ್ಷಿಕೋತ್ಸವವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ರಾಜ್ಯ ಸರ್ಕಾರವು ವಿಕಲ ಚೇತನರ ಬಗ್ಗೆ ತಾರತಮ್ಯ ತೋರುತ್ತಿದೆ. ವಿಕಲಚೇತರಿಗೆ ಸರಿಯಾದ ವೇತನ ಸಿಗುತ್ತಿಲ್ಲ. ಮಾತು ಬಲ್ಲವರಿಗೆ ಮಾತ್ರ ಸರ್ಕಾರ ಮಣೆ ಹಾಕುತ್ತಿದೆ. ಇದು ತೀರಾ ಬೇಸರದ ಸಂಗತಿ ಎಂದರು.
ಸರ್ಕಾರ ವಿಕಲಚೇತನರಿಗೆ ನೀಡುತ್ತಿರುವ ಮಾಸಾಶನ 1,400 ರೂ.ಗಳು ಇಂದಿನ ದಿನಗಳಲ್ಲಿ ಯಾವುದಕ್ಕೂ ಸಾಲುವುದಿಲ್ಲ. ಸರ್ಕಾರಿ ನೌಕರರಿಗೆ ಪ್ರತಿ ವರ್ಷ ಎರಡು ಹೆಚ್ಚುವರಿ ತುಟ್ಟಿಭತ್ಯ ಮತ್ತು ವಾರ್ಷಿಕ ವೇತನದಲ್ಲಿ ಬಡ್ತಿ ಸಿಗುತ್ತಿದ್ದು, ಅವರಿಗೆ ಕೈ ತುಂಬಾ ಸಂಬಳ ಬರುತ್ತಿದೆ. ಆದರೆ ವಿಕಲಚೇತನರ ಪರಿಸ್ಥಿತಿ ತೀರಾ ವಿಭಿನ್ನವಾಗಿದೆ. ಹಾಗಾಗಿ ಇಂದಿನಿಂದಲೇ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ವಿಕಲ ಚೇತನರಿಗೆ ನೀಡುವ ಮಾಸಾಶನವನ್ನು ಹೆಚ್ಚಿಸುವಂತೆ ಕೋರಿ ಮನವಿ ಪತ್ರವನ್ನು ಸಿದ್ದಪಡಿಸಿ ತಮಗೆ ಕಳುಹಿಸಿಕೊಟ್ಟಲ್ಲಿ ಸದರಿ ಮನವಿಗಳನ್ನು ಮುಖ್ಯಮಂತ್ರಿಗಳವರಿಗೆ ಅವಗಾಹನೆಗೆ ತರುವುದಲ್ಲದೆ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರುತ್ತೇನೆಂದು ತಿಳಿಸಿದ ಮರಗೋಳ್ ತಾವು ವಿಕಲ ಚೇತನರ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ಇತ್ತರು.
1940ರಲ್ಲಿ ಸ್ಥಾಪನೆಗೊಂಡ ಈ ಸಂಘವು ಅಂದಿನಿದ ಇಂದಿನವರೆಗೆ ಕಿವುಡರ ಸರ್ವತೋಮುಖ ಪ್ರಗತಿಗಾಗಿ ಶ್ರಮಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾದದ್ದು. ಮುಂದಿನ ದಿನಗಳಲ್ಲೂ ಇದೇ ರೀತಿ ಸಂಘಟಿತರಾಗುವಂತೆ ಸಮಾರಂಭದಲ್ಲಿ ಉಪಸ್ಥಿತರಿದ್ದ ಕಿವುಡರಿಗೆ ಕಿವಿಮಾತು ಹೇಳಿದರು.
ಇಂದಿನ ಸಮಾರಂಭದಲ್ಲಿ ಕಲ್ಬುರ್ಗಿಯ ಇಂದಿರಾಗಾಂಧಿ ಅಭಿಮಾನಿಗಳ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಮಾಯಸಂದ್ರ ರಂಗಪ್ಪಾಯಾದವ್, ಸರ್ಕಾರಿ ಸಾಕಾರ ಸಂಘದ ಮಾಜಿ ಅಧ್ಯಕ್ಷ ಜಿ. ಪುಟ್ಟಸ್ವಾಮಿ, ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕ ಎಲ್.ಆರ್. ನರಸಿಂಹಯ್ಯ, ಕಿವುಡು ಮಕ್ಕಳ ಶಾಲೆಯ ಅಧೀಕ್ಷಕ ಗಂಗಾಧರ್, ಜಿ.ಡಿ.ಎಫ್.ಎ, ಸಿ.ಒ.ಎಂ.ಎಂ (ಆರ್ಟಿಸ್ಟ್) ಆರ್. ವೆಂಕಟೇಶ್, ಸಂಘದ ಗೌರವಾಧ್ಯಕ್ಷ ಆರ್. ಶ್ರೀಧರ್, ಕಾರ್ಯದರ್ಶಿ ಎಸ್. ವಿನಯ್ ಸೇರಿದಂತೆ ಸಂಘದ ಸದಸ್ಯರುಗಳು ಇದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಕಿವುಡರ ಮಕ್ಕಳ ಸರ್ಕಾರಿ ಪಾಠಶಾಲೆಯ ನಿವೃತ್ತ ಶಿಕ್ಷಕ ಆರ್. ರಾಮೇಗೌಡ ವಹಿಸಿದ್ದರು.