ವಿಕಲಚೇತನ ನೌಕರರ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ:ರಾಜು ಲೆಂಗಟಿ

ಕಲಬುರಗಿ:ನ.9:ವಿಕಲಚೇತನ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ ರೀತಿಯ ಪ್ರಯತ್ನ ಮಾಡುವುದಾಗಿ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ರಾಜು ಲೆಂಗಟಿ ಹೇಳಿದರು.
ಅವರು ನಗರದ ಸರಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನ ನೌಕರರ ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿ,ವಿಕಲಚೇತನ ನೌಕರರಿಗೆ ಅವರ ಸೇವಾ ಜೇಷ್ಠತೆಯನ್ನು ಅನುಸರಿಸಿ ನೀಡಬೇಕಾಗಿರುವ ಶೇಕಡಾ 3 ರಷ್ಟು ಬಡ್ತಿ ಮೀಸಲಾತಿ ಆದೇಶವನ್ನು ಜಾರಿಗೆ ಮಾಡುವಂತೆ ವಿಕಲಚೇತನ ನೌಕರರ ಸಂಘದ ವತಿಯಿಂದ ಅನೇಕ ಹೋರಾಟವನ್ನು ಮಾಡಿದರೂ ಕೂಡಾ ಆದೇಶ ಜಾರಿಗೆ ಮಾಡಿರುವುದಿಲ್ಲ.ಅನೇಕ ಇಲಾಖೆಯಲ್ಲಿ ಬಡ್ತಿ ನೀಡುವುದರಿಂದ ವಿಕಲಚೇತನ ನೌಕರರು ಬಡ್ತಿ ಸೌಲಭ್ಯದಿಂದ ವಂಚಿತರಾಗುತ್ತಾರೆ.ಸರಕಾರ ಕೂಡಲೇ ಬಡ್ತಿ ಮೀಸಲಾತಿ ಆದೇಶವನ್ನು ಜಾರಿಗೆ ಮಾಡಬೇಕು.ವಿಕಲಚೇತನ ನೌಕರರ ಸಂಘವು ಇತರೇ ಸಂಘಟನೆಗಳಿಗೆ ಮಾದರಿಯಾಗುವ ರೀತಿಯ ಕಾರ್ಯ ಮಾಡುತ್ತಿದೆ.ವಿಕಲಚೇತನರು ಸಂಕುಚಿತವಾದ ಮನೋಭಾವನೆಯನ್ನು ಬಿಟ್ಟು ವಿಶಾಲವಾದ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು.ಸಂಘವು ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯದಲ್ಲಿ ಸದಸ್ಯರು ಭಾಗವಹಿಸಬೇಕು ಎಂದು ಹೇಳಿದರು.
ವಿಕಲಚೇತನ ನೌಕರರ ಸಂಘದ ನೂತನ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಕುಮಸಿ ಮಾತನಾಡಿ, ವಿಕಲಚೇತನ ನೌಕರರ ಸಂಘದ ಹೋರಾಟದ ಫಲವಾಗಿ ಮೂಲವೇತನದ ಶೇಕಡಾ 6 ರಷ್ಟು ಸಂಚಾರಿ ಭತ್ಯೆಯನ್ನು ಪಡೆಯಲಾಗಿದೆ.ಯಂತ್ರ ಚಾಲಿತ ವಾಹನ ಖರೀದಿ ಮಾಡಿದರೆ ಶೇಕಡಾ 40ರಷ್ಟು ಹಣವನ್ನು ಹಿಂಬರಿಸುವ ಆದೇಶ ಮಾಡಿಸಲಾಗಿದೆ.ಸರಕಾರಿ ನೌಕರರಾಗಿದ್ದು,ಮಕ್ಕಳು ವಿಕಲಚೇತನರಾದರೆ ಶಿಕ್ಷಣ ಭತ್ಯೆಯನ್ನು ರೂ.500 ರಿಂದ ರೂ.1000ಕ್ಕೆ ಹೆಚ್ಚಿಸಲಾಗಿದೆ. ಅನೇಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಲಾಗಿದೆ.ಇನ್ನೂ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಸಂಘದ ವತಿಯಿಂದ ಹೋರಾಟವನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಮಹೇಶ ಹೂಗಾರ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಮ ಗುಣಾರಿ,ಉಪಾಧ್ಯಕ್ಷರಾದ ಪರಮೇಶ್ವರ ದೇಸಾಯಿ,ಚಿತ್ತಾಪುರ ತಾಲೂಕ ಸರಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷರಾದ ಬಸವರಾಜ ಬೋಳನವಾಡಿ,ಅನುದಾನಿ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಹನುಮಂತ ಮರಡಿ,ಪ್ರಧಾನ ಕಾರ್ಯದರ್ಶಿ ಅಶೋಕ.ಎಸ್.,ಮಲ್ಲಿನಾಥ ಹುಡೇದ,ವಿಕಲಚೇತನ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಯ್ಯಾ ಹಿರೇಮಠ,ಸಂಘಟನಾ ಕಾರ್ಯದರ್ಶಿ ರಾಜಕುಮಾರ ಸುಂಬುಡ್ ಸಂಘದ ನಿರ್ದೇಶಕರಾದ ಶ್ರೀಶೈಲಾ ವಿಶ್ವಕರ್ಮ,ಶಾಂತಪ್ಪ ಕ್ಯಾತರ,ವಿಜಯಕುಮಾರ ಬಡಿಗೇರ,ಶಿವರಾಜ ಕಲಕಟ್ಟಿ,ಮೌನೇಶ ರೆಷ್ಮೀ,ಶೇಕ ರಿಜ್ವಾನ್,ಖಂಡೆಪ್ಪ ಪಾಂಡುರಂಗ,ಶಾರದಾ,ಮೈಬೂ ಪಟೇಲ ಮುಂತಾದವರು ಹಾಜರಿದ್ದರು.