ವಿಕಲಚೇತನ ಗೌರವಧನ ಕಾರ್ಯಕರ್ತರ ಸೇವೆ ಖಾಯಂಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಜೂ. 15ರಂದು ಅನಿರ್ಧಿಷ್ಟ ಧರಣಿ

ಕಲಬುರಗಿ,ಜೂ.12: ರಾಜ್ಯದ ಎಂಆರ್‍ಡಬ್ಲೂ, ವಿಆರ್‍ಡಬ್ಲೂ ವಿಕಲಚೇತನರ ಗೌರವ ಧನ ಕಾರ್ಯಕರ್ತರ ಸೇವೆ ಖಾಯಂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಜೂನ್ 15ರಂದು ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ವಿಕಲಚೇತನ ಗೌರವಧನ ಕಾರ್ಯಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಖಾಸಿಂಸಾಬ್ ಡೊಂಗರಗಾಂವ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 7860 ಜನ ಎಂಆರ್‍ಡಬ್ಲೂ, ವಿಆರ್‍ಡಬ್ಲೂ ಕಾರ್ಯಕರ್ತರು ಗೌರವ ಧನದ ಮೇಲೆ ಸೆವೆ ಸಲ್ಲಿಸುತ್ತಿದ್ದಾರೆ. ಆದಾಗ್ಯೂ, ಅವರ ಸೇವೆಯನ್ನು ಖಾಯಂ ಮಾಡದೇ ಇರುವುದರಿಂದ ಅವರ ಬದುಕು ಅತಂತ್ರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವಿವಿಧ ಯೋಜನೆಗಳನ್ನು ಅಂಗವಿಕಲರಿಗೆ ತಲುಪಿಸಲು ಅವರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ 2007-2008ನೇ ಸಾಲಿನಲ್ಲಿ ತಾಲ್ಲೂಕು ಪಂಚಾಯಿತಿಗೆ ಒಬ್ಬರಂತೆ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ (ಎಂಆರ್‍ಡಬ್ಲೂ) ಗ್ರಾಮ ಪಂಚಾಯಿತಿಗೆ ಒಬ್ಬರಂತೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ (ವಿಆರ್‍ಡಬ್ಲೂ) ಮತ್ತು ನಗರ ವ್ಯಾಪ್ತಿಯಲ್ಲಿ 2018ರಲ್ಲಿ ನಗರ ಪುನರ್ವಸತಿ ಕಾರ್ಯಕರ್ತ (ಯುಆರ್‍ಡಬ್ಲೂ) ಎಂದು ಗೌರವ ಧನದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಪ್ರಸ್ತುತ ವಿಕಲಚೇತನ ಗೌರವಧನ ಕಾರ್ಯಕರ್ತರು ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 15 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಸೇವಾ ಭದ್ರತೆಯಿಂದ ವಂಚಿತರಾಗಿದ್ದಾರೆ. ಕಚೇರಿಯಲ್ಲಿ ಕುಳಿತುಕೊಂಡು ಕೆಲಸ ಮಾಡಲು ಸಹ ಯಾವುದೇ ಮೂಲಭೂತ ಸೌಲಭ್ಯಗಳೂ ಸಹ ಇಲ್ಲವಾಗಿದೆ. ಭವಿಷ್ಯದಲ್ಲಿ ಇಂದಲ್ಲ, ನಾಳೆ ನಮ್ಮ ಹುದ್ದೆಗಳು ಖಾಯಂ ಆಗುತ್ತದೆ ಎಂಬ ನಂಬಿಕೆಯಿಂದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಹಾಕದೇ ಜೀವನ ಹಾಳು ಮಾಡಿಕೊಂಡಿದ್ದೇವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸಾವಿರಾರು ಕಾರ್ಯಕರ್ತರ ವಯೋಮಿತಿ ಮೀರಿ ಹೋಗುತ್ತಿದೆ. ಸರ್ಕಾರ ಕೂಡಲೇ ಗೌರವಧನ ಕಾರ್ಯಕರ್ತರ ಹುದ್ದೆಗಳನ್ನು ಖಾಯಂಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಮಹಾರಾಷ್ಟ್ರದ ಮಾದರಿಯಲ್ಲಿ ವಿಕಲಚೇತನರಿಗಾಗಿ ಪ್ರತ್ಯೇಕ ಸಚಿವಾಲಯ ಘೋಷಣೆ ಮಾಡಬೇಕು. ಕಳೆದ ನಾಲ್ಕೈದು ವರ್ಷಗಳಿಂದ ಹುದ್ದೆಗಳು ನೇಮಕ ಮಾಡಿಕೊಂಡಿಲ್ಲ. ಕೂಡಲೇ ಹೊಸ ನೇಮಕಾತಿ ಆದೇಶ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು.
ಮಹಾನಗರ ಪಾಲಿಕೆಯಲ್ಲಿ ವಾರ್ಡ್‍ಗೆ ಒಬ್ಬರಂತೆ ಹೊಸ ನೇಮಕಾತಿ ಹೊರಡಿಸಬೇಕು. ಗೌರವಧನ ಕಾರ್ಯಕರ್ತರು ಕರ್ತವ್ಯದಲ್ಲಿ ಮರಣ ಹೊಂದಿದಲ್ಲಿ ಐದು ಲಕ್ಷ ರೂ.ಗಳವರೆಗೆ ಸಹಾಯಧನ ಹೆಚ್ಚಿಸಬೇಕು. ನಿಯಮ ಸಡಿಲಿಕೆ ಕನಿಷ್ಠ ಆರು ತಿಂಗಳು ಕಾಲ ಸೇವೆ ಸಲ್ಲಿಸಿದವರಿಗೆ ಪರಿಗಣಿಸಭೇಕು ಎಂದು ಆಗ್ರಹಿಸಿದ ಅವರು, ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ವೆಂಕಟಪ್ಪ ಚವ್ಹಾಣ್, ಸಿದ್ಧಾರೂಢ ಎಂ. ಬಿರಾದಾರ್, ಮಲ್ಲಿಕಾರ್ಜುನ್ ಕಟ್ಟಿಮನಿ ಮುಂತಾದವರು ಉಪಸ್ಥಿತರಿದ್ದರು.