
ನ್ಯೂಯಾರ್ಕ್, ಮಾ.೬- ವಿಕಲಚೇತನರ ಹಕ್ಕುಗಳ ಪರ ಹೋರಾಡಿ, ಬಹುದಿನಗಳ ಚಳವಳಿಗಳ ಮೂಲಕ ಅಮೆರಿಕಾದಲ್ಲಿ ಭಾರೀ ಪ್ರಸಿದ್ಧಿ ಪಡೆದುಕೊಂಡಿದ್ದ ಖ್ಯಾತ ವಕೀಲೆ ಜೂಡಿ ಹ್ಯೂಮನ್ (೭೫) ಅವರು ವಾಷಿಂಗ್ಟನ್ ಡಿ.ಸಿಯಲ್ಲಿ ನಿಧನರಾಗಿದ್ದಾರೆ. ನಿಧನ ಹೊಂದಿದ ಸುದ್ದಿಯನ್ನು ಹ್ಯೂಮನ್ ಅವರ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.
೧೯೪೭ ರಲ್ಲಿ ಫಿಲಡೆಲ್ಫಿಯಾದಲ್ಲಿ ಹುಟ್ಟಿ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ ಬೆಳೆದ ಹ್ಯೂಮನ್ ಅವರು, ಎರಡು ವರ್ಷದವಳಿದ್ದಾಗ ಪೋಲಿಯೊಗೆ ತುತ್ತಾಗಿದರು ಮತ್ತು ನಡೆಯುವ ಸಾಮರ್ಥ್ಯವನ್ನು ಕಳೆದುಕೊಂಡರು. ಹ್ಯೂಮನ್ ಅವರು ವಿಕಲಚೇತನರ ಹಕ್ಕುಗಳ ಚಳವಳಿಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ನಾಯಕರಾಗಿದ್ದರು. ತಮ್ಮ ಕ್ರಿಯಾಶೀಲತೆಯು ಚಳವಳಿಯ ಮೂಲಕ ಇಡೀ ಅಮೆರಿಕಾದಲ್ಲಿ ಪ್ರಮುಖ ಶಾಸನಗಳ ತಿದ್ದುಪಡಿ ಹಾಗೂ ಅನುಷ್ಠಾನಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕಾಗಿ ಹ್ಯೂಮನ್‌ರನ್ನು “ಅಂಗವೈಕಲ್ಯ ಹಕ್ಕುಗಳ ಆಂದೋಲನದ ‘ತಾಯಿ’ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಬಾಲ್ಯದಲ್ಲಿ ಪೋಲಿಯೋ ಸೋಂಕಿಗೆ ಒಳಗಾಗಿದ್ದ ಹ್ಯೂಮರ್ ಅವರು ಬಳಿಕ ಕಠಿಣ ವಿದ್ಯಾಭ್ಯಾಸದ ಮೂಲಕ ವ್ಯಾಸಂಗ ಮಾಡಿ, ಗಾಲಿಕುರ್ಚಿಯ ಮೂಲಕ ಶಿಕ್ಷಕಿ ವೃತ್ತಿ ಆರಂಭಿಸಿದ ನ್ಯೂಯಾರ್ಕ್‌ನ ಮೊದಲ ವ್ಯಕ್ತಿ ಎಂಬ ಹೆಗ್ಗಲಿಕೆಗೆ ಪಾತ್ರರಾಗಿದ್ದರು. ವಿಕಲಚೇತನರ ಕಾನೂನಿಗಾಗಿ ಹ್ಯೂಮನ್ ಹಲವು ಸುತ್ತಿನ ಕಾನೂನು ಹೋರಾಟದ ಜೊತೆಗೆ ಚಳವಳಿಯಲ್ಲೂ ಭಾಗಿಯಾಗಿ ಎಲ್ಲರ ಗಮನ ಸೆಳೆದಿದ್ದರು. ಅಲ್ಲದೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಕಾಲತ್ತು ಸಂಸ್ಥೆಗಳನ್ನು ಕೂಡ ಸ್ಥಾಪಿಸಿ, ವಿಕಲಚೇತನರಿಗೆ ನೆರವಾಗಿದ್ದರು.