ವಿಕಲಚೇತನರ ಬದುಕು ಬೆಳಗಲು ಬದ್ದ-ಕೆಂಪರಾಜು

ಗೌರಿಬಿದನೂರು,ನ.೧೪- ಸಮಾಜದಲ್ಲಿ ಶೋಷಣೆಗೆ ಒಳಗಾದ ಅಂಗವಿಕಲರ ಬದುಕಿನಲ್ಲಿ ಹೊಸ ಚೈತನ್ಯ ಕಾಣುವ ನಿಟ್ಟಿನಲ್ಲಿ ಅಗತ್ಯ ಪ್ರೋತ್ಸಾಹವನ್ನು ನೀಡುವ ಮೂಲಕ ಅವರ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸಲು ಬದ್ಧವಾಗಿದ್ದೇವೆ ಎಂದು ಜಿ.ಪಂ ಸದಸ್ಯ ಕೆ.ಕೆಂಪರಾಜು ತಿಳಿಸಿದರು.
ನಗರದ ಹೊರವಲಯದಲ್ಲಿ ಅವರ ಕಚೇರಿಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಅಂಗವಿಕಲರಿಗಾಗಿ ನೆರವು ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ತಾಲ್ಲೂಕಿನಲ್ಲಿ ಸುಮಾರು ೨೬೦೦ ಕ್ಕೂ ಹೆಚ್ಚು ಮಂದಿ ಬಹು ಅಂಗಗಳ ವೈಪಲ್ಯದಿಂದ ಬಳಲುತ್ತಿದ್ದರೂ ಕೂಡ ಸ್ವಾವಲಂಭಿಗಳಾಗಿ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ. ಇವರೆಲ್ಲರ ಬದುಕಿಗೆ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಉಚಿತವಾಗಿ ಕೆ.ಆರ್. ಸ್ವಾಮಿ ಪೌಂಡೇಷನ್ ವತಿಯಿಂದ ಹೆಲ್ತ್ ಕಾರ್ಡ್ ಗಳನ್ನು ಮಾಡಿಸುವ ಚಿಂತನೆ ಮಾಡಲಾಗಿದೆ. ಹಂತಹಂತವಾಗಿ ತಾಲ್ಲೂಕಿನ ಎಲ್ಲ ಅಂಗವಿಕಲರಿಗೆ ಈ ಸೌಲಭ್ಯವನ್ನು ಕಲ್ಪಿಸಲಾಗುವುದು. ಸಹಾಯಧನ ಪಡೆದಂತಹ ಪ್ರತಿಯೊಬ್ಬರೂ ಕೂಡ ಸ್ಥಳೀಯ ಮಟ್ಟದಲ್ಲಿ ಒಮ್ಮತದಿಂದ ನಮ್ಮ ಕಾರ್ಯಕರ್ತರ ಜತೆಯಲ್ಲಿ ಕೈಜೋಡಿಸಿ ಕಾರ್ಯನಿರ್ವಹಿಸಬೇಕಾಗಿದೆ. ತಾಲ್ಲೂಕಿನಲ್ಲಿ ನಿರಂತರವಾಗಿ ಈ ಸೇವೆಯನ್ನು ಮುಂದುವರೆಸಿಕೊಂಡು ಹೋಗಲು ನಿಮ್ಮೆಲ್ಲರ ಆಶೀರ್ವಾದ ಬೇಕಾಗಿದೆ ಎಂದು ಹೇಳಿದರು.
ಅಂಗವಿಕಲರ ಸಂಘದ ಅಧ್ಯಕ್ಷರಾದ ಮಧುಸೂದನ್ ಮಾತನಾಡಿ, ಗೌರಿಬಿದನೂರು ತಾಲ್ಲೂಕಿನ ಇತಿಹಾಸದಲ್ಲೇ ಮೊದಲ ಬಾರಿಗೆ ತಾಲ್ಲೂಕಿನಲ್ಲಿನ ಎಲ್ಲ ಅಂಗವಿಕಲರನ್ನು ಒಟ್ಟಿಗೆ ಸೇರಿಸಿ ಸಂಕಷ್ಟದಲ್ಲಿ ಅವರ ಕುಟುಂಬಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ತಲಾ ೨೦೦೦ ಸಹಾಯಧನ ಹಾಗೂ ದೀಪಾವಳಿ ಹಬ್ಬದ ವಿಶೇಷ ಉಡುಗೊರೆ ನೀಡುತ್ತಿರುವ ಕೆ.ಕೆಂಪರಾಜು ರವರ ಕಾರ್ಯ ನಿಜಕ್ಕೂ ಅಭೂತಪೂರ್ವವಾಗಿದೆ. ಇದರಿಂದ ವಿವಿಧ ಅಂಗವೈಪಲ್ಯದಿಂದ ಬಳಲುತ್ತಿರುವವರ ಬದುಕಿಗೆ ಆಸರೆಯಾದಂತಿದೆ. ಜತೆಗೆ ಮುಂದಿನ ದಿನಗಳಲ್ಲಿ ಅವರಲ್ಲಿ ಸಮಾಜಕ್ಕೋಸ್ಕರ ದುಡಿಯಬೇಕು ಎಂಬ ಛಲ ಬೆಳೆಯುತ್ತದೆ. ಇಂತಹ ಸಮಾಜಮುಖಿ ಕಾರ್ಯಗಳು ಮಾಡುವ ಮೂಲಕ ಜನರ ಮನ್ನಣೆ ಗಳಿಸಿರುವ ಕೆಂಪರಾಜು ನಿಜವಾದ ಜನನಾಯಕರಾಗಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಕೆ.ಕೆಂಪರಾಜು ಹಿರಿಯ ಅಂಗವಿಕಲರನ್ನು ವೇದಿಕೆಯಲ್ಲಿ ಸನ್ಮಾನಿಸಿ ಉಡುಗೊರೆ ಹಾಗೂ ಪ್ರೋತ್ಸಾಹ ಧನವನ್ನು ವಿತರಣೆ ಮಾಡಿದರು. ವೇದಿಕೆಯಲ್ಲಿ ತಾಲ್ಲೂಕಿನ ವಿವಿದೆಡೆಗಳಿಂದ ಆಗಮಿಸಿದ್ದ ಸುಮಾರು ೧೩೦೦ ಕ್ಕೂ ಹೆಚ್ಚು ಅಂಗವಿಕಲರಿಗೆ ಕೆ.ಕೆಂಪರಾಜು ಪ್ರೋತ್ಸಾಹ ಧನ ಹಾಗೂ ಉಡುಗೊರೆ ನೀಡಿದರು.
ತಾಲ್ಲೂಕು ಅಂಗವಿಕಲರ ಸಂಘದ ಉಪಾಧ್ಯಕ್ಷ ಅಶ್ವತ್ಥ್, ಮುಖಂಡರಾದ ಗಂಗಾಧರಪ್ಪ, ನರೇಶ್ ರೆಡ್ಡಿ, ಮುದುಗೆರೆ ರಾಜಶೇಖರ, ವೇದಲವೇಣಿ ರಾಮು, ನಂಜುಂಡಪ್ಪ, ನಾರಾಯಣಪ್ಪ, ಸತೀಶ್, ಶಿವಣ್ಣ, ರಮೇಶ್ ನಾಯಕ್, ನಾಗರಾಜ್, ಶಿವಕುಮಾರ್, ವೇಣುಗೋಪಾಲ್, ಪ್ರಕಾಶ್, ನಾರಾಯಣಸ್ವಾಮಿ, ಗೋಪಾಲಯ್ಯ, ಗಂಗಾಧರ್ ಇದ್ದರು.