ವಿಕಲಚೇತನರ ನಿಷೇಧಿತ ಪದಬಳಕೆ ಕ್ಷಮೆಯಾಚನೆಗೆ ಮನವಿ

ಲಿಂಗಸುಗೂರು,ಜ.೧೧- ರಾಜಕಾರಣಿಗಳು ಹಾಗೂ ಸಚಿವರು ಆದಿಯಾಗಿ ಇತರರು ಟೀಕಾಪ್ರಹಾರ ವೇಳೆ ನಿಷೇಧಿತ ಪದಬಳಕೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ, ವಿಕಲಚೇತನರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ರಾಜ್ಯದ ನಾನಾ ಪಕ್ಷಗಳ ಜನ ಪ್ರತಿನಿಧಿಗಳು ಪರಸ್ಪರ ವಿರೋಧ ವ್ಯಕ್ತಪಡಿಸುವ ಭರದಲ್ಲಿ ನಿಯತ್ತಿನ ಪ್ರಾಣಿಗಳಿಗೆ ಹೋಲಿಸುವುದು ಹಾಗೂ ಅಂಗವಿಕಲರಿಗೆ ನೋವು ಉಂಟಾಗುವ ರೀತಿಯಲ್ಲಿ ಕುಂಟ, ಕುರುಡ ಎಂಬ ನಿಷೇಧಿತ ಪದ ಸಾರ್ವಜನಿಕ ಪದ ಬಳಸಿ ಅವಮಾನಿಸುತ್ತಿರುವುದು ವಿಷಾಧಕರ ಕ್ರಮ ಇತ್ತೀಚೆಗೆ ತೋಟಗಾರಿಕೆ ಸಚಿವ ಮುನಿರತ್ನ ಅವರು ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಪತ್ರಿಕಾಗೋಷ್ಠಿ ನಡೆಸುವ ವೇಳೆ ಕುಂಟನ ಕಥೆ ನೆನಪಾಗುತ್ತದೆ ಎಂಬ ಪದ ಬಳಕೆ ಮಾಡಿ ಅಂಗವಿಕಲರ ಹಕ್ಕುಗಳ ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.
ಸಚಿವ ಮುನಿರತ್ನ ಅವರು ಕ್ಷಮೆಯಾಚಿಸಬೇಕು. ಮುಂದೆ ವಿಕಲಚೇತನರ ಬಗೆಗಿನ ನಿಷೇಧಿತ ಪದ ಬಳಕೆಗೆ ಕಡಿವಾಣ ಬೀಳಬೇಕು. ವಿಕಲಚೇತನರನ್ನು ಗೌರವದಿಂದ ಕಾಣುವ ಕೆಲಸವಾಗಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ವಿಕಲಚೇತನರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ನಾಗರಾಜ ತಿಪ್ಪಣ್ಣ, ರಾಜ್ಯ ಕಾರ್ಯದರ್ಶಿ ಸುರೇಶ ಭಂಡಾರಿ, ಸಂಗಮೇಶ, ಮಂಜುನಾಥ, ಯಲ್ಲಪ್ಪ, ಅಮರೇಶ ಸುಂಕದ, ರೋಸ್ ಮೇರಿ ಸೇರಿದಂತೆ ಇದ್ದರು.