ವಿಕಲಚೇತನರಿಗೆ ಸೂಕ್ತ ಸೌಲಭ್ಯಗಳು ದೊರೆತು ಅಭಿವೃದ್ಧಿಯಾಗಲಿ

ಕಲಬುರಗಿ.ಡಿ.03: ಸಮಾಜ ವಿಕಲಚೇತನರ ಬಗ್ಗೆ ಅನುಕಂಪ ತೋರಿದರೆ ಸಾಲದು. ಬದಲಿಗೆ ಅವರಿಗೆ ದೊರೆಯಬೇಕಾದ ಎಲ್ಲಾ ಸವಲತ್ತುಗಳು ಒದಗಿಸಿಕೊಡಬೇಕು. ಅವರನ್ನು ನೋಡುವ ದೃಷಿ ಉತ್ತಮವಾಗಬೇಕು. ವಿಕಲಚೇತನರು ಕೂಡಾ ತಮ್ಮಲಿರುವ ಕೀಳರಿಮೆಯನ್ನು ಬಿಟ್ಟು, ಧನಾತ್ಕಕ ಚಿಂತನೆಯನ್ನು ರೂಢಿಸಿಕೊಂಡರೆ, ಸಾಮಾನ್ಯರಿಗಿಂತಲೂ ಕಡಿಮೆಯಿಲ್ಲದ ಸಾಧನೆ ಮಾಡಲು ಸಾಧ್ಯವಿದೆ ಎಂದು ವಿಕಲಚೇತನ ಸಹಾಯವಾಣಿ ಪ್ರತಿಷ್ಠಾನದ ರಾಜ್ಯ ಸಂಚಾಲಕ ಬಸವರಾಜ ಹೆಳವರ ಯಾಳಗಿ ಹೇಳಿದರು.
ನಗರದ ಆಳಂದ ರಸ್ತೆಯ ಶಿವ ನಗರದಲ್ಲಿರುವ ‘ಎಂ.ಎಂ.ಎನ್ ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ‘ವಿಶ್ವ ವಿಕಲಚೇತನ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿಕಲಚೇತನರಿಗೆ ಸಂಬಂಧಿಸಿದ ಕಾಯ್ದೆ-ಕಾನೂನುಗಳು, ಸರ್ಕಾರ ಯೋಜನೆಗಳು ಕೇವಲ ಕಾಗದದಲ್ಲಿ ಉಳಿಯಬಾರದು. ಸೂಕ್ತ ಫಲಾನುಭವಿಗೆ ತಲುಪಿ, ಅದರ ಸದುಪಯೋಗವಾದಾಗ ಮಾತ್ರ ವಿಕಲಚೇತನರ ನೈಜ ಅಭಿವೃದ್ಧಿ ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರ ಯುಡಿಐಡಿ ಯೋಜನೆ ಅಡಿಯಲ್ಲಿ ಗುರುತಿನ ಚೀಟಿಯನ್ನು ವಿತರಿಸಲಾಗುತ್ತಿದ್ದು, ಇದನ್ನು ಎಲ್ಲಾ ದಿವ್ಯಾಂಗರು ಪಡೆದುಕೊಳ್ಳಬೇಕು. ನಮ್ಮ ಭಾಗದಲ್ಲಿರುವ ದಿವ್ಯಾಂಗರ ಸಾಧನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ನ್ಯಾಯವಾದಿ ಹಣಮಂತರಾಯ ಎಸ್.ಅಟ್ಟೂರ್, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಸೂರ್ಯಕಾಂತ ಸಾವಳಗಿ, ಬಸವರಾಜ ಹೆಳವರ ಯಾಳಗಿ, ಶರಣಬಸಪ್ಪ ನರೋಣಿ, ಪ್ರಭುಲಿಂಗ ಮೂಲಗೆ, ಸಂಗಣ್ಣ ಮುಗಳಿ, ಮಲ್ಲಿನಾಥ ಹೂಗಾರ, ಎಸ್.ಎಸ್.ಪಾಟೀಲ ಬಡದಾಳ, ಪ್ರಕಾಶ ಸರಸಂಬಿ, ಶಿವಶರಣಪ್ಪ ಹಡಪದ, ರವಿ ಬಿರಾಜಾದಾರ, ಶಾಂತಪ್ಪ ಪಾಟೀಲ, ಓಂಕಾರ ಗೌಳಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.