
ಚಿಕ್ಕನಾಯಕನಹಳ್ಳಿ, ಆ. ೮- ಮೊಬಲಿಟಿ ಇಂಡಿಯಾ ಸಂಸ್ಥೆಯು ವಿಕಲಚೇತನರ ನೆರವಿಗಾಗಿ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸುಮಾರು ೪೦೦ ಮಂದಿ ವಿಕಲಚೇತನ ಮಕ್ಕಳ ಆರೋಗ್ಯ, ಆರೈಕೆ ಮುಂತಾದ ಸಹಾಯ ಹಸ್ತದೊಂದಿಗೆ ಅವರಿಗೆ ನೆರವಾಗಿದೆ ಎಂದು ಶಾಸಕ ಸಿ.ಬಿ. ಸುರೇಶ್‌ಬಾಬು ಹೇಳಿದರು.
ಪಟ್ಟಣದ ತೀನಂಶ್ರೀ ಸಭಾ ಭವನದಲ್ಲಿ ಏರ್ಪಡಿಸಿದ್ದ ಮೊಬಿಲಿಟಿ ಇಂಡಿಯಾ ಸೇವಾ ಸಂಸ್ಥೆಯ ೨೯ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿ ಅಲ್ಬಿಲಾಶಂಕರ್ ಮಾತನಾಡಿ, ಜಿಲ್ಲೆಯ ಚಿಕ್ಕನಾಯನಕಹಳ್ಳಿ ಹಾಗೂ ತುರುವೇಕೆರೆ ತಾಲ್ಲೂಕಿನಲ್ಲಿ ನಮ್ಮ ಸಂಸ್ಥೆಯು ಎರಡು ವರ್ಷದಿಂದ ವಿಕಲಚೇತರನ್ನು ಗುರುತಿಸಿ ಅವರ ಸ್ವಾವಲಂಬನೆಗಾಗಿ ನೆರವು ನೀಡಲಾಗುತ್ತಿದೆ. ಈವರೆಗೆ ೪೧೬ ವಿಕಲಚೇತರನ್ನು ಗುರುತಿಸಿ ಅವರಿಗೆ ಅಗತ್ಯ ಸಲಕರಣೆಗಳನ್ನು ಉಚಿತವಾಗಿ ನೀಡಲಾಗಿದೆ ಎಂದರು.
೨೯ನೇ ವಾರ್ಷಿಕೋತ್ಸವದ ಅಂಗವಾಗಿ ಹಲವು ವಿಕಲಚೇತನರಿಗೆ ಅಗತ್ಯವಿರುವ ಶ್ರವಣ ಯಂತ್ರಗಳು, ವ್ಹೀಲ್‌ಚೇರ್‌ಗಳು ಇನ್ನಿತರ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಾಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಸಂತಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಹೊನ್ನಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಮಚಂದ್ರಯ್ಯ, ಜಿಲ್ಲಾ ವಿಕಲಚೇತನ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ರಮೇಶ್, ಮೊಬಿಲಿಟಿ ಸಂಸ್ಥೆಯ ಸಿಬ್ಬಂದಿಗಳು ಭಾಗವಹಿಸಿದ್ದರು.