ವಿಕಲಚೇತನರಿಗೆ ದಿನಸಿ ಕಿಟ್ ವಿತರಣೆ

ಕೋಲಾರ,ಮೇ.೨೮:ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕಿಡಾಗಿರುವ ಬಡವರ ನೆರವಿಗೆ ವಿಶ್ವ ಹಿಂದೂಪರಿಷತ್ ಹಾಗೂ ಬಜರಂಗದಳ ನಿಲ್ಲುವ ಮೂಲಕ ಶ್ಲಾಘನೀಯ ಕೆಲಸ ಮಾಡುತ್ತಿವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತುಮಕೂರು ವಿಭಾಗ ಸಂಘ ಚಾಲಕ್ ಡಾ.ಶಂಕರ್ ನಾಯಕ್ ತಿಳಿಸಿದರು.
ನಗರದ ಕಠಾರಿಪಾಳ್ಯ ಕನಕ ಬ್ಯಾಸ್ಕೆಟ್ ಬಾಲ್ ಕ್ರೀಡಾಂಗಣದಲ್ಲಿ ವಿಹಿಂಪ ಮತ್ತು ಬಜರಂಗದಳ ಸಂಘಟನೆಗಳ ವತಿಯಿಂದ ೫೦ಕ್ಕೂ ಹೆಚ್ಚು ಬಡವರು, ವಿಕಲಚೇತನ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿ ಅವರು ಮಾತನಾಡುತ್ತಿದ್ದರು.
ಕೋವಿಡ್ ಇಡೀ ಪ್ರಪಂಚವನ್ನೇ ತಲ್ಲಣಿಸುವಂತೆ ಮಾಡಿದೆ, ಇದರಿಂದ ಭಾರತವೂ ಹೊರತಾಗಿಲ್ಲ ಎಂದ ಅವರ, ಭಾರತ ಸರ್ಕಾರ ರೋಗ
ತಡೆಗೆ ಶಕ್ತಿ ಮೀರಿ ಶ್ರಮಿಸುತ್ತಿದೆ ಎಂದು ತಿಳಿಸಿದರು.ಸರ್ಕಾರದ ಕಾರ್ಯದಲ್ಲಿ ಹಿಂದೂ ಸಂಘಟನೆಗಳು ಕೈಜೋಡಿಸಿ ಸೋಂಕಿತರಿಗೆ ನೆರವಾಗುವ ಸಾಮಾಜಿಕ ಕಾಳಜಿ ತೋರುತ್ತಿದ್ದು, ಇಂತಹ ಕಾರ್ಯಗಳೇ ಶಾಶ್ವತವಾಗಿ ಉಳಿಯುವಂತದ್ದು ಎಂದರು.
ಒಂದೇ ಬಾರಿಗೆ ದೇಶದ ಉತ್ಪಾದನೆಗಿಂತ ೧೦ ಪಟ್ಟು ಹೆಚ್ಚು ಆಕ್ಸಿಜನ್ ಅಗತ್ಯತೆ ತಲೆದೋರಿದಾಗ ಸರ್ಕಾರ ವಿದೇಶಗಳಿಂದಲೂ ಆಕ್ಸಿಜನ್ ತರಿಸಿ ಜನರಿಗೆ ನೆರವಾಗುವ ಕೆಲಸ ಮಾಡಿದೆ ಎಂದರು.
ಭಾರತ ಸರ್ಕಾರದ ಕಾರ್ಯವನ್ನು ಇಡೀ ವಿಶ್ವವೇ ಶ್ಲಾಘಿಸಿದೆ ಆದರೆ ನಮ್ಮದೇ ದೇಶದ ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ, ಸರ್ಕಾರದ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸೋಣ ಎಂದರು.
ಕೋವಿಡ್ ಮಹಾಮಾರಿಯನ್ನು ಕಟ್ಟಿಹಾಕುವಲ್ಲಿ ದೇಶದ ವಿಜ್ಞಾನಿಗಳು ಸಿದ್ದಪಡಿಸಿದ ಲಸಿಕೆಯ ಕುರಿತು ಕೆಲವರು ಅಪಸ್ವರ ತೆಗೆದರು ಎಂದು ವಿಷಾಧಿಸಿದ ಅವರು, ಇದೀಗ ಲಸಿಕೆ ಕೋವಿಡ್ ಮಾರಿಯಿಂದ ರಕ್ಷಣೆ ನೀಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬಜರಂಗದಳದ ಬಾಬು, ಬಾಲಾಜಿ, ವಿಜಯಕುಮಾರ್, ಶ್ರೀಧರ್, ರೆಡ್ಡಿ, ಪವನ್,ಅನಂತ್, ನಾಣಿ, ವೆಂಕಿ, ಪ್ರಕಾಶ್‌ರಾವ್, ಅಭಿಷೇಕ್, ವಿಜಿಕುಮಾರ್ ಮತ್ತಿತರರಿದ್ದರು.