ವಿಕಲಚೇತನರಿಂದ ಬೆಂಗಳೂರಿಗೆ ಪಾದಯಾತ್ರೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಅ14: ವಿಕಲಚೇತನರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಪ್ರಜಾಪ್ರಭುತ್ವ ಸಾಮಾನ್ಯ ನಾಗರಿಕರ ಮತದಾರರ ಹೋರಾಟ ಸಮಿತಿ ವತಿಯಿಂದ ನಗರದ ವಿಕಲಚೇತನರು, ಅ.16 ರಂದು ಹೊಸಪೇಟೆಯ ಪುನೀತ್ ರಾಜಕುಮಾರ್ ವೃತ್ತದಿಂದ ಬೆಂಗಳೂರು ಪ್ರೀಡಂ ಪಾರ್ಕ್‍ವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಸಮಿತಿ ಅಧ್ಯಕ್ಷ ಎಂ. ಶರೀಫ್ ಹಾಗೂ ಕಾರ್ಯದರ್ಶಿ ಸಂತೋಷ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಮಾತನಾಡಿದ ಅವರು, ವಿಲಚೇತನರ ಹಲವು ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ, ಬೆಂಗಳೂರಿನಲ್ಲಿ ಆಹೋರಾತ್ರಿ ಧರಣಿ ಹಮ್ಮಿಕೊಂಡಿದ್ದು, ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಸರ್ಕಾರ ಬೇಡಿಕೆ ಈಡೇರಿಸುವವರೆಗೂ ಸ್ವಗ್ರಾಮಕ್ಕೆ ಹಿಂತಿರುಗುವುದಿಲ್ಲ. ಪ್ರಾಣಬಿಟ್ಟೇವು ಹೊರತು ಹೋರಾಟವನ್ನು ಕೈ ಬಿಡಲ್ಲ ಎಂದು ಹೇಳಿದರು.
ಬೇಡಿಕೆಗಳು:
ಅಂಗನವಾಡಿ ಶಿಕ್ಷಕರು, ಕಾರ್ಯಕರ್ತೆರನ್ನು ಸರ್ಕಾರಿ ನೌಕರರಾಗಿ ನೇಮಕ ಮಾಡಿಕೊಳ್ಳಬೇಕು. ಅಂಗನವಾಡಿ ಕಾರ್ಯಕರ್ತೆರು ವಿಕಲಚೇತನರ ಸರ್ವಾಂಗೀಣ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ. ಅವರನ್ನು ಸರ್ಕಾರಿ ಖಾಯಂ ನೌಕರರನ್ನಾಗಿ ಪರಿಗಣಿಸಬೇಕು. ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಹಾಗೂ ನಗರಸಭೆಗಳಲ್ಲಿ ಕೆಲಸ ಮಾಡುತ್ತಿರುವ ವಿಆರ್‍ಡಬ್ಲ್ಯೂ, ವೈಆರ್‍ಡಬ್ಲ್ಯೂ ಹಾಗೂ ಎಂಆರ್‍ಡಬ್ಲ್ಯೂ ಅವರನ್ನು ಪೂರ್ಣ ಪ್ರಮಾಣದ ಸರ್ಕಾರಿ ನೌಕರರಾಗಿ ಘೋಷಿಸಬೇಕು. ಹೋಮ್ ಗಾರ್ಡ್‍ಗಳನ್ನು ಸರ್ಕಾರಿ ನೌಕರರನ್ನಾಗಿ ನೇಮಕ ಮಾಡಿಕೊಳ್ಳಬೇಕು. ಸರಕಾರಿ ಕಚೇರಿಗಳಲ್ಲಿ ಒಳಗುತ್ತಿಗೆದಾರದ ಮೇಲೆ ದುಡಿಯುತ್ತಿರುವ  ಕೆಎಸ್‍ಆರ್‍ಟಿಸಿ ಸಂಸ್ಥೆಯನ್ನು ಸರ್ಕಾರಿ ಸಂಸ್ಥೆಯಾಗಿ ಘೋಷಿಸಬೇಕು. ವಿದ್ಯಾವಂತ ವಿಕಲಚೇತನರಿಗೆ ಸರ್ಕಾರಿ ಕಚೇರಿ ಹಾಗೂ ಅಥವಾ ಖಾಸಗಿ ಕಂಪನಿಗಳಲ್ಲಿ ಆರ್ಹತೆ ಅನುಗುಣವಾಗಿ ನೇಮಕ ಮಾಡಿಕೊಳ್ಳಬೇಕು. ಎಸಿ, ಎಸ್‍ಟಿ, ಓಬಿಸಿ ಹಾಗೂ ಸಾಮಾನ್ಯ ವರ್ಗಕ್ಕೆ ನೀಡಿರುವ ಮೀಸಲಾತಿಯಂತೆ ವಿಕಲಚೇತನರಿಗೂ ನೀಡುವ ಮೂಲಕ ರಾಜಕೀಯ ಅವಕಾಶಕ್ಕಾಗಿ ಮೀಸಲಾತಿ ವ್ಯವಸ್ಥೆ ಒಸಗಿಸಬೇಕು. ದೃಷ್ಠಿದೋಷವುಳ್ಳ ಮಕ್ಕಳನ್ನು ಪಾಲಕರು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಅವರ ಭವಿಷ್ಯಕ್ಕಾಗಿ ಸರ್ಕಾರ ಮುಂದಾಗಬೇಕು. 5 ಗ್ಯಾರಂಟಿಗಳನ್ನು ಜನ ಸಾಮಾನ್ಯರಿಗೆ ತಲಪುವುದು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗಾಗಿ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಮಾಹಿತಿ ನೀಡಿದರು. ಮಹಿಳಾ ಘಟಕದ ಅಧ್ಯಕ್ಷೆ ಧರಣೀಶ್ವರಿ, ಉಪಾಧ್ಯಕ್ಷೆ ಪಿ.ಸಿ.ಶಾಂತ, ರಮೇಶ್ ಛಲವಾದಿ, ಕಿರಣ್ ರಾಜ್, ಮಂಜುನಾಥ ಹಾಗೂ ಖಾದರ್ ಸಾಬ್ ಪತ್ರಿಕಾಗೋಷ್ಠಿಯಲ್ಲಿದ್ದರು. 

One attachment • Scanned by Gmail