ವಿಕಲಚೇತನರನ್ನು ಶಿಕ್ಷಣದ ಮುಖ್ಯವಾಹಿನಿಗೆ ತರಲು ವಿಶೇಷ ಯೋಜನೆ: ಕಿಲ್ಲೇದಾರ


ಬಾದಾಮಿ, ನ19: ಸಮಗ್ರ ಶಿಕ್ಷಣ ಯೋಜನೆಯಡಿ ವಿಕಲಚೇತನ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರಲು ವಿಶೇಷ ಕಾರ್ಯಕ್ರಮಗಳನ್ನು ಯೋಜಿಸಲಾಗುತ್ತಿದೆ. ಈ ಕುರಿತು ನ.20 ರಂದು ಬೆಂಗಳೂರಿನ ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ(ಗುಣಮಟ್ಟ) ಜಾಸ್ಮೀನ್ ಕಿಲ್ಲೇದಾರ ತಿಳಿಸಿದರು.
ಅವರು ಪಟ್ಟಣದ ಆನಂದನಗರದ ಶಾಲಾ ಸಿದ್ಧತಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದರು. ಕಳೆದ ಒಂದುವರೆ ವರ್ಷದಿಂದ ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳಿಗೆ ಶಿಕ್ಷಣದಲ್ಲಿ ತೊಂದರೆಯಾಗಿದೆ. ಅನುದಾನದ ಕೊರತೆಯಿಂದ ಕೆಲವು ಯೋಜನೆಗಳು ನಡೆದಿಲ್ಲ. ಪ್ರತಿ ವರ್ಷ ವಿಕಲಚೇತನರ ವೈದ್ಯಕೀಯ ತಪಾಸಣಾ ಶಿಬಿರ, ಸಾಧನ ಸಲಕರಣೆ ವಿತರಣೆ, ಪಾಲಕರ, ಶಿಕ್ಷಕರ ತರಬೇತಿ ಸೇರಿದಂತೆ ಅನೇಕ ಯೋಜನೆಗಳು ಅನುದಾನದ ಕೊರತೆಯಿಂದ ನಡೆದಿಲ್ಲ ಎಂದರು.
ಜಿಲ್ಲೆಯಲ್ಲಿ ಸುಮಾರು 4000 ಕ್ಕೂ ಹೆಚ್ಚು ವಿಕಲಚೇತನ ಮಕ್ಕಳಿದ್ದು, ಇವರನ್ನು ವಿವಿದ ಕಾರ್ಯಕ್ರಮಗಳ ಮೂಲಕ ಸಾಮಾನ್ಯ ಮಕ್ಕಳೊಂದಿಗೆ ಸಮನ್ವಯ ಶಿಕ್ಷಣ ನೀಡಲಾಗುತ್ತದೆ. ಈಗಾಗಲೇ ವಿಕಲಚೇತನ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡಲಾಗುತ್ತಿದೆ. ತೀವ್ರ ಬಹುವಿಕಲತೆ, ದೈಹಿಕ ವಿಕಲತೆಯ ಮಕ್ಕಳಿಗೆ ಪಿಜಿಯೋಥೆರಪಿ ಮಾಡಲಾಗುತ್ತಿದೆ ಎಂದ ಅವರು, ಸಮಸ್ಯೆಗಳನ್ನು ರಾಜ್ಯಮಟ್ಟದ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ.ಮಾಗಿ, ಸಂಪನ್ಮೂಲ ಶಿಕ್ಷಕರಾದ ಎಸ್.ಎಸ್.ಚೌಕದ, ಎಚ್.ಆರ್.ಕಡಿವಾಲ, ಕೆ.ಎಸ್.ಮಸಬಿನಾಳ ಹಾಜರಿದ್ದರು.