ವಿಎಸ್ ಕೆ ವಿವಿ ಅತಿಥಿಗೃಹ ನಾಳೆಯಿಂದ ಕೋವಿಡ್ ಐಸೊಲೇಷನ್ ಸೆಂಟರ್

ಬಳ್ಳಾರಿ:ಮೇ.4- ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ನಾಳೆಯಿಂದ 59 ಹಾಸಿಗೆಗಳ ಕೋವಿಡ್ ಐಸೊಲೇಷನ್ ಸೆಂಟರ್ ಆರಂಭ ಮಾಡುತ್ತಿದೆ ಎಂದು ವಿವಿಯ ಕುಲಪತಿ ಪ್ರೊ. ಸಿದ್ದು ಅಲಗೂರು ಹೇಳಿದರು.
ಅವರು ಇಂದು ವಿವಿಯಲ್ಲಿ ಸುದ್ದಿಗೋಷ್ಟಿ ನಡೆಸಿ, ಶಿಕ್ಷಣದ ಜೊತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿ, ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಆಸರೆಯಾಗಬೇಕೆಂಬ ನಿಟ್ಟಿನಲ್ಲಿ ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್ (ಜೆಐಟಿಓ ) ಮತ್ತು ಸೇವಾಭಾರತಿ ಬಳ್ಳಾರಿ ಇವರ ಜಂಟಿ ಸಹಯೋಗದಲ್ಲಿ ಇದನ್ನು ಆರಂಭಿಸುತ್ತಿದೆ.
ಈ ಕೋವಿಡ್ ಕೇರ್ ಐಸೊಲೇಷನ್ ಕೇಂದ್ರಕ್ಕೆ ದಾಖಲಾತಿ ಹೊಂದಬಯಸುವವರು ಜಿಲ್ಲಾಡಳಿತದ ಸೂಕ್ತ ಮಾರ್ಗದ ಮೂಲಕವೇ ಬರಬೇಕು, ಕೋವಿಡ್-19 ಪರೀಕ್ಷೆಯ ಪಾಸಿಟಿವ್ ವರದಿ ತೆಗೆದುಕೊಂಡು ವೈದ್ಯರ ಅಗತ್ಯ ಸೂಚನೆಯ ಮೇರೆಗೆ ಐಸೊಲೇಷನ್‍ಗೆ ಒಳಪಡುವ ರೋಗಿಗಳಿಗೆ ಮಾತ್ರ ಅವಕಾಶವಿರುತ್ತದೆ. ಇಲ್ಲಿ ತಜ್ಞ ವೈದ್ಯರು, ನುರಿತ ನರ್ಸ್‍ಗಳ ಸೇವೆಯು ದಿನದ 24 ಘಂಟೆಗಳ ಕಾಲವೂ ಇರುತ್ತದೆ.
ಮನೆಯಂತಹ ಕಾಳಜಿಪೂರ್ಣ ವಾತಾವರಣವನ್ನು ಹೊಂದಿದ್ದು, ರೋಗಿಗಳಿಗೆ ಪೌಷ್ಠಿಕ ಆಹಾರವನ್ನು ಒದಗಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
ರೋಗಿಗಳಿಗೆ ಪ್ರತಿ ದಿನ ಬೆಳಿಗ್ಗೆ ಯೋಗ ಮಾಡಿಸಲಿದೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಶೀಘ್ರದಲ್ಲಿ ಚೇತರಿಸಿಕೊಳ್ಳುವ ನಿಮಿತ್ತ ಓದಲು ಉತ್ತಮ ಪುಸ್ತಕಗಳನ್ನು ಹಾಗೂ ಶಿಕ್ಷಣಾತ್ಮಕ ಸೃಜನಶೀಲ ವಿಡಿಯೋಗಳನ್ನು ತೋರಿಸಲಾಗುವುದು ಇದೆಲ್ಲವೂ ಉಚಿತವಾಗಿರುತ್ತದೆಂದು ತಿಳಿಸಿದರು.
ಇಲ್ಲಿ ಆಕ್ಸಿಜನ್, ವೆಂಟಿಲೇಟರ್ ಮತ್ತು ಐ.ಸಿ.ಯು.ನಂತಹ ವ್ಯವಸ್ಥೆಗಳು ಇರುವುದಿಲ್ಲ. ಆರೋಗ್ಯದಲ್ಲಿ ತುರ್ತು ಏರುಪೇರಾದಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲು ಆರೋಗ್ಯ ಇಲಾಖೆಯ ಅಗತ್ಯ ಸಹಕಾರದೊಂದಿಗೆ ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ.
ಪತ್ರಿಕಾ ಗೋಷ್ಠಿಯಲ್ಲಿ ಕುಲಸಚಿವ ಪ್ರೊ. ಶಶಿಕಾಂತ್ ಎಸ್. ಉಡಕೇರಿ, ಜೆಐಟಿಓನ ವಿನೋದ್ ಬಗ್ರೀಚಾ, ಸೇವಾಭಾರತಿಯ ನರೇಶ್ ಚಿರಾನಿಯ, ಸ್ಟೇಟ್ ಎಕ್ಸಿಕ್ಯೂಟಿವ್ ಮೆಂಬರ್, ಡಾ. ವಿಜಯ್ ಭಾಸ್ಕರ್ ರೆಡ್ಡಿ, ಪ್ರಸನ್ನ ಮುಂತಾದವರು ಹಾಜರಿದ್ದರು.