ವಿಎಸ್‍ಕೆ ವಿವಿಯಲ್ಲಿ ಪ್ರಸಾರಂಗದ ಉದ್ಘಾಟನೆ ಪ್ರಾಧ್ಯಾಪಕರು ಗ್ರಾಮವಾಸ್ತವ್ಯ ಮಾಡಿ ಜನಸಾಮಾನ್ಯರ ಕಷ್ಟಕಾರ್ಪಣ್ಯ ಅರಿಯಿರಿ:ಸ.ಚಿ.ರಮೇಶ್

????????????????????????????????????

ಬಳ್ಳಾರಿ ,ಮಾ.24: ಸರ್ಕಾರಿ ಅಧಿಕಾರಿಗಳಂತೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳು ಸಹ ಕನಿಷ್ಠ 4 ದಿನ ಗ್ರಾಮ ವಾಸ್ತವ್ಯ ಮಾಡಬೇಕು; ಆಗ ಜನಸಾಮಾನ್ಯರ ಕಷ್ಟ ಕಾರ್ಪಣ್ಯ ಅರಿತು ಅವನ್ನು ಕಿರುಹೊತ್ತಿಗೆಗಳ ಮೂಲಕ ಬರೆದು ಹೊರತರಲು ಸಾಧ್ಯವಾಗುತ್ತದೆಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ.ರಮೇಶ ಹೇಳಿದರು.
ಅವರು ನಿನ್ನೆ ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಪ್ರಸಾರಾಂಗದ ಉದ್ಘಾಟನೆ ಮತ್ತು ಪ್ರಚಾರೋತ್ಸವ ಮಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜೋದ್ಧಾರಕ ಕೆಲಸ ಮಾಡುವ ಉಪನ್ಯಾಸಕರುಗಳು ಗ್ರಾಮವಾಸ್ತವ್ಯ ಮಾಡುವುದರಿಂದ ಪ್ರಗತಿಶೀಲ ಚಿಂತನೆಯು ಸಾಧ್ಯವಾಗುತ್ತದೆ. ಇದರಿಂದ ಸಾರ್ವಜನಿಕರ ನೈಜ ಸಮಸ್ಯೆಗಳೆಡೆಗೆ ಬೆಳಕು ಚೆಲ್ಲಬಹುದು. ಪ್ರಸಾರಾಂಗವು ಯಾವುದೇ ವಿಶ್ವವಿದ್ಯಾಲಯದ ಮುಖವಾಣಿಯಂತೆ ಕಾರ್ಯ ನಿರ್ವಹಿಸುತ್ತದೆ. ಪೂರ್ಣತೆ ಮತ್ತು ಧನ್ಯತೆ ಪಡೆಯಲು ಪ್ರತಿ ವಿಶ್ವವಿದ್ಯಾಲಯವು ಪ್ರಸಾರಾಂಗವನ್ನು ಚಲನಶೀಲತೆಗೊಳಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆವಹಿಸಿದ್ದ ಕುಲಪತಿ ಪ್ರೊ.ಸಿದ್ದು ಆಲಗೂರ ಮಾತನಾಡಿ, ಪುಸ್ತಕ ಪ್ರಕಟಣೆ ಜೊತೆಗೆ ಇಂದಿನ ಡಿಜಿಟಲ್ ಯುಗಕ್ಕೆ ಪೂರಕವಾಗಿ ಇ-ಪುಸ್ತಕಗಳನ್ನು ಪ್ರಸಾರಾಂಗದ ಮೂಲಕ ಹೊರತರುವ ಯೋಜನೆಯನ್ನು ವಿಶ್ವವಿದ್ಯಾಲಯ ಹೊಂದಿದೆ. ಮುಂಬರುವ ದಿನಗಳಲ್ಲಿ ವಿವಿ ವತಿಯಿಂದ ತಾಲೂಕಿಗೊಂದರಂತೆ ಉಪನ್ಯಾಸ ಶಿಬಿರ ಆಯೋಜಿಸಿ ಪ್ರಸಾರಾಂಗದ ಮೂಲಕ ಪುಸ್ತಕ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಸಿಂಡಿಕೆಟ್ ಸದಸ್ಯ ಪ್ರೊ.ಬಸವರಾಜ ಪೂಜಾರ್ ಮಾತನಾಡಿ, ಪ್ರಸಾರಾಂಗ ಎಂಬುದು ವಿಶ್ವವಿದ್ಯಾಲಯ ಎಂಬ ತೇರಿಗೆ ಕಳಶವಿದ್ದಂತೆ. ವಿವಿಯ ಸಿಂಡಿಕೇಟ್ ಮಂಡಳಿ ಪ್ರಸಾರಾಂಗದ ಚಾಲನೆಗೆ ಹೆಗಲುಕೊಟ್ಟಿದೆ ಎಂದರು.
ಪ್ರಸಾರಾಂಗದ ನಿರ್ದೇಶಕ ಡಾ. ಅನಂತ ಝೆಂಡೇಕರ್, ಸಿಂಡಿಕೇಟ್ ಸದಸ್ಯರುಗಳಾದ ಪದ್ಮಾ ವಿಠ್ಠಲ್, ಡಾ.ಕನಕೇಶಮೂರ್ತಿ , ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.