ವಿಂಡೀಸ್ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್, ೧೪೧ ರನ್ ಗೆಲುವು ಅಶ್ವಿನ್ ಗೆ ೧೨ ವಿಕೆಟ್ (ಸ್ಟಮಕ್)

ಡೊಮಿನಿಕಾ,ಜು.೧೪-ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಸಂಘಟಿತ ಹೋರಾಟದ ಮೂಲಕ ವೆಸ್ಟ್‌ಇಂಡೀಸ್ ವಿರುದ್ಧ ನನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ
ಭಾರತ, ಇನ್ನಿಂಗ್ಸ್ ಹಾಗೂ ೧೪೧ ರನ್‌ಗಳ ಭರ್ಜರಿ ಜಯಗಳಿಸಿದೆ. ಈ ಗೆಲುವಿನೊಂದಿಗೆ ಭಾರತ ೧-೦ಯಿಂದ ಮುನ್ನಡೆ ಸಾಧಿಸಿದೆ. ಕೇವಲ ಮೂರು ದಿನಗಳಲ್ಲಿ ಮೊದಲ ಟೆಸ್ಟ್ ಮುಕ್ತಾಯಗೊಂಡಿದೆ.
ಮೂರನೇ ದಿನದ ಆಟ ಮುಂದುವರೆಸಿದ ಭಾರತ, ಐದು ವಿಕೆಟ್ ನಷ್ಟಕ್ಕೆ ೪೨೧ ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಚೊಚ್ಚಲ ಪಂದ್ಯವಾಡಿದ ಯಶಸ್ವಿ ಜೈಸ್ವಾಲ್ ೧೭೧ ರನ್ ಗಳಿಸಿದರು. ವಿರಾಟ್ ಕೊಹ್ಲಿ ೭೬ರನ್ ಗಳಿಸಿದರೆ, ರವೀಂದ್ರ ಜಡೇಜಾ ಅಜೇಯ ೩೭ ರನ್ ಗಳಿಸಿದರು. ಅಜಿಂಕ್ಯಾ ರೆಹಾನೆ ೩ ರನ್ ಗಳಿಸಿ ಔಟಾದರು. ಇಶಾನ್ ಕಿಶನ್ ಒಂದು ರನ್ ಗಲಿಸಿ ಔಟಾಗದೆ ಉಳಿದರು. ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ೨೭೧ ರನ್ ಗಳ ಭಾರೀ ಮುನ್ನಡೆ ಸಾಧಿಸಿತು.
ಸೋಲಿನ ದವಡೆಗೆ ಸಿಲುಕಿದ್ದ ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್ ನಲ್ಲಿ ಅಶ್ವಿನ್ ಬೌಲಿಂಗ್ ದಾಳಿಗೆ ಧೂಳಿಪಟವಾಯಿತು. ಕೇವಲ ೧೩೦ ರನ್ ಗಳಿಗೆ ಸರ್ವಪತನ ಕಂಡು ಸೋಲಿಗೆ ಶರಣಾಯಿತು. ವಿಂಡೀಸ್ ಪರ ಅಲಿಕ್ ಅತಾಂಜೆ, ೨೮, ಜೇಸನ್ ಹೋಲ್ಡರ್ ೨೦, ಜೋಮೆಲ್ ವಾರ್ರಿಕನ್ ೧೮ ರನ್ ಗಳಿಸಿದ್ದನ್ನು ಹೊರತುಪಡಿಸಿ ಉಳಿದ ಆಟಗಾರರು ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು.
ಭಾರತದ ಪರ ಅಶ್ವಿನ್ ೭ ವಿಕೆಟ್ ಕಬಳಿಸಿದರೆ, ಜಡೇಜಾ ೨ ಹಾಗೂ ಸಿರಾಜ್ ಒಂದು ವಿಕೆಟ್ ಗಳಿಸಿದರು. ಅಶ್ವಿನ್ ಈ ಪಂದ್ಯದಲ್ಲಿ ಒಟ್ಟು ೧೨ ವಿಕೆಟ್ ಪಡೆದು ವಿಂಡೀಸ್ ಕುಸಿತಕ್ಕೆ ನಾಂದಿ ಹಾಡಿದರು. ಈ ಮೂಲಕ ವಿಂಡೀಸ್ ನೆಲದಲ್ಲಿ ಎರಡೂ ಇನ್ನಿಂಗ್ಸ್ ನಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡದೆ ಮೊದಲ ಭಾರತೀಯ ಬೌಲರ್ ಎಂಬ ಕೀರ್ತಿಗೆ ಅಶ್ವಿನ್ ಭಾಜನರಾಗಿದ್ದಾರೆ.
ಅಶ್ವಿನ್ ಅವರು ೨೩ನೇ ಬಾರಿ ಟೆಸ್ಟ್ ಪಂದ್ಯದಲ್ಲಿ ಕೊನೆಯ ವಿಕೆಟ್ ಗಳಿಸಿ ಶೇನ್ ವಾರ್ನ್ ದಾಖಲೆಯನ್ನು ಅಳಿಸಿ ಹಾಕಿದರು. ಜತೆಗೆ ೧೨ ವಿಕೆಟ್ ಉರುಳಿಸುವುದರೊಂದಿಗೆ ಅಶ್ವಿನ್ ೮ನೇ ಬಾರಿ ಟೆಸ್ಟ್ ಪಂದ್ಯದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಸಾಧನೆ ಮಾಡಿ ಅನಿಲ್ ಕುಂಬ್ಳೆ ದಾಖಲೆಯನ್ನು ಸರಿಗಟ್ಟಿದ್ದಾರೆ.
ವಿಂಡೀಸ್ ವಿರುದ್ಧ ನಡೆಯಲಿರುವ ಎರಡನೇ ಟೆಸ್ಟ್ ನಲ್ಲಿ ಅಶ್ವಿನ್ ೧೦ ವಿಕೆಟ್ ಗಳಿಸಿದರೆ ಈ ಸಾಧನೆ ಮಾಡಿದ ನಂಬರ್ ಒನ್ ಬೌಲರ್ ಆಗಿ ಹೊರಹೊಮ್ಮಲಿದ್ದಾರೆ.