ವಾಹನ ಸವಾರರ ಸ್ವಾಗತಿಸುವ ನಾರುವ ಮಾಂಸ ತ್ಯಾಜ್ಯ ವಸ್ತುಗಳು

ನಾಗರಾಜ ಕುಂಬಾರ

ಕೊಲ್ಹಾರ:ಫೆ.27: ಪಟ್ಟಣದ ಯುಕೆಪಿ ಕ್ರಾಸ್ ಮೂಲಕಹಾದು ಹೋಗಿರುವ ರಾಜ್ಯದ ಪ್ರಮುಖ ಹೆದ್ದಾರಿಯಾದ ಹುಬ್ಬಳ್ಳಿ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ಪ್ರತಿನಿತ್ಯ ರಸ್ತೆ ಬದಿಗಳಲ್ಲಿ ಕಸ ಹಾಗೂ ಕೊಳೆತ ತ್ಯಾಜ್ಯಗಳನ್ನು ಎಸೆಯುವ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಪಟ್ಟಣದ ಯುಕೆಪಿ ಕ್ರಾಸಗೆ ಹೊಸದಾಗಿ ಕಾಲಿಟ್ಟವರಿಗೆ ಕಸದ ರಾಶಿ, ಸತ್ತ ನಾಯಿಗಳು, ಮೀನು, ಕೋಳಿ ತ್ಯಾಜ್ಯ ಸೇರಿದಂತೆ ಗಬ್ಬು ವಾಸನೆ ಸ್ವಾಗತಿಸುತ್ತದೆ. ಪ್ರಮುಖ ರಸ್ತೆಗಳಲ್ಲಿ ಸುತ್ತಾಡಿದರೆ ರಸ್ತೆ ಬದಿ, ಅಂಗಡಿ ಬದಿ, ಖಾಲಿ ಜಾಗಗಳಲ್ಲಿ ಕಸದ ರಾಶಿಯ ದರ್ಶನವಾಗುತ್ತದೆ. ಸ್ಥಳೀಯ ಆಡಳಿತವು ಕಸಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇರಿಸುತ್ತಿದ್ದರೂ ಯಶಸ್ವಿಯಾಗುತ್ತಿಲ್ಲ

ಮಾಂಸದ ತ್ಯಾಜ್ಯವನ್ನು ರಸ್ತೆ ಬದಿಗೆ ಸುರಿಯಲಾಗುತ್ತಿದೆ. ಇದರಿಂದ ಬೀದಿ ನಾಯಿಗಳ ಹಾವಳಿಯೂ ಹೆಚ್ಚಾಗಿದೆ.

ತ್ಯಾಜ್ಯದ ಮೂಟೆಯನ್ನು ತರುವ ಕೆಲವರು, ಅದನ್ನು ರಸ್ತೆ ಬದಿಗಳಲ್ಲಿ ಹಾಗೂ ಖಾಲಿ ಜಾಗಗಳಲ್ಲಿ ಎಸೆದು ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ನಿರಂತರವಾಗಿ ಮಾಂಸ ತ್ಯಾಜ್ಯ ಬಿಸಾಡಲಾಗುತ್ತಿದೆ. ಮಾಂಸ ಹಾಗೂ ತ್ಯಾಜ್ಯ ವಸ್ತುಗಳನ್ನು ನಾಯಿ, ಕಾಗೆಗಳು ಕಚ್ಚಿ ಎಳೆದಾಡಿ ಎಲ್ಲೆಂದರಲ್ಲಿ ಹಾಕುತ್ತಿದೆ ಇದರಿಂದ ಸುತ್ತಮುತ್ತಲ ಪರಿಸರ ನಾರುತ್ತಿದೆ. ಬಿಸಾಡಿರುವ ತ್ಯಾಜ್ಯ ರಾಶಿ ನೋಡಿದರೆ ‘ಸ್ವಚ್ಛತೆ’ ಜಾಗೃತಿ ಎಲ್ಲಿ ಹೋಯ್ತು ಎಂಬ ಪ್ರಶ್ನೆ ಕಾಡುವುದು ಸಹಜ. ಮಾಂಸದ ಚೂರುಗಳಿಗೆ ಕಚ್ಚಾಡುವ ಬೀದಿ ನಾಯಿಗಳು,ಕೊಳೆತ ತ್ಯಾಜ್ಯವನ್ನು ಪ್ಲಾಸ್ಟಿಕ್ ಕವರ್ ಸಹಿತವಾಗಿ ರಸ್ತೆಗೆ ಎಳೆದು ಬಿಸಾಡುತ್ತಿವೆ. ಪರಿಣಾಮ ಹೆದ್ದಾರಿಯಲ್ಲಿ ಸಾಗುವ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.

ಮಾಂಸದ ತ್ಯಾಜ್ಯ ಕೊಳೆಯುವ ವಸ್ತುಗಳನ್ನು ಎಸೆದು ಹೋಗುವುದರಿಂದ ಕೆಟ್ಟ ವಾಸನೆ ನಡುವೆಯೇ ಪ್ರತಿನಿತ್ಯ ಸಂಚಾರಿಸುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ವಾಹನ ಚಲಾಯಿಸುವಂತೆ ಆಗಿದೆ ಗಾಳಿಯ ರಭಸವಾಗಿ ಬೀಸುವಾಗ ಒಣಗಿದ ಕಸ, ಹಗುರವಾದ ವಸ್ತುಗಳು ಗಾಳಿಯಲ್ಲಿ ತೂರಿ ಬರುತ್ತವೆ ಎಂದು ಪಟ್ಟಣದ ಮಹೇಶ್ ತುಂಬರಮಟ್ಟಿ ಅವರು ಸಂಜೆವಾಣಿ ಗೆ ತಿಳಿಸಿದರು.