ವಾಹನ ನಿಲುಗಡೆ ಮಾಡದಂತೆ ಬೆಲ್ಲಂ ನರಸರೆಡ್ಡಿ ಒತ್ತಾಯ

ರಾಯಚೂರು, ಆ.೪,ನಗರದ ರಾಜೇಂದ್ರ ಗಂಜ್ ಮಾರುಕಟ್ಟೆ ಪ್ರಾಂಗಣದಲ್ಲಿ ಲಾರಿ ಮತ್ತು ಟೆಂಪೋಗಳನ್ನು ನಿಲುಗಡೆ ಮಾಡದಂತೆ ಅಗತ್ಯ ಕ್ರಮವಹಿಸಬೇಕೆಂದು ಒತ್ತಾಯಿಸಿ ದಿ ಗಂಜ್ ಮರ್ಚೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮತಿ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈಗಾಗಲೇ ಸಂಘದಿಂದ ಅನೇಕ ಬಾರಿ ಮನವಿಗಳನ್ನು ಸಲ್ಲಿಸಿ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು.
ಎಲ್ಲಾ ತರಹದ ಖಾಲಿ ವಾಹನಗಳನ್ನು ಮಾರುಕಟ್ಟೆ ಪ್ರಾಂಗಣದ ವ್ಯಾಪಾರಸ್ಥರ ಅಂಗಡಿಗಳ ಮುಂದೆ ನಿಲುಗಡೆ ಮಾಡದಂತೆ ಕ್ರಮ ಕ್ರಮವಹಿಸಬೇಕು ಎಂದರು. ಹೊರ ಪ್ರದೇಶಗಳಿಂದ ಬರುವ ಲಾರಿಗಳು ಸ್ಥಳೀಯ ಟ್ರಾನ್ಸಮೋರ್ಟ್ ಲಾರಿಗಳು ಮತ್ತು ಕೃಷಿ ಉತ್ಪನ್ನಗಳನ್ನು ಸಾಗಿಗುವಂತಹ ಸಣ್ಣ ಸಣ್ಣ ಟೆಂಪೋಗಳು ಪ್ರಾಂಗಣದ ಅಂಗಡಿಗಳ ಮುಂಭಾಗದಲ್ಲಿ ಅಡ್ಡಾದಿಡ್ಡಿಯಾಗಿ ದಿನಗಟ್ಟಲೇ ನಿಲ್ಲುತ್ತಿದ್ದು ಮತ್ತು ಅಂಗಡಿಗಳ ಹಿಂದೆ ಇರುವ ಗೋದಾಮುಗಳ ಮುಂಭಾಗದ ರಸ್ತೆಗಳಲ್ಲಿಯೂ ಸಹ ನಿಲ್ಲುತ್ತಿರುವದರಿಂದ ರೈತರು ಮಾರಾಟಕ್ಕೆ ತಂದಂತಹ ಕೃಷಿ ಉತ್ಪನ್ನಗಳನ್ನು ರಾಶಿ ಮಾಡುವುದಕ್ಕೆ ವ್ಯಾಪಾರಸ್ಥರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಅವರು ಆರೋಪಿಸಿದರು. ಇದರಿಂದ ಅಂಗಡಿಗಳ ಹಿಂಭಾಗದಲ್ಲಿರುವ ಗೋದಾಮುಗಳ ಬಾಗಿಲುಗಳ ಮುಂದೆ ಮದ್ಯಪಾನ ಮಾಡುವುದು ಮತ್ತು ಅನೈತಿಕ ಚಟುವಟಿಕೆಗಳು ನಡೆಯುವ ಸಂದರ್ಭಗಳು ಕೂಡ ಹೆಚ್ಚಾಗಿರುತ್ತವೆ. ಅಲ್ಲದೇ ಕೆಲವು ಸಂಘರ್ಷಗಳಲ್ಲಿ ರೈತರು ಮಾರಾಟಕ್ಕೆ ತಂದಂತ ಕೃಷಿ ಉತ್ಪನ್ನಗಳ ಚೀಲಗಳು ಕಳ್ಳತನವಾಗಿರುವ ಪ್ರಕರಣಗಳೂ ಸಹ ವ್ಯಾಪಾರಸ್ಥರ ಅಂಗಡಿಗಳಲ್ಲಿ ಸಂಭವಿಸಿದ ಉದಾಹರಣೆಗಳಿವೆ ಎಂದರು.
ಹೊರಗಿನಿಂದ ಬಂದಂತಹ ಲಾರಿಗಳು ಹಾಗೂ ಸ್ಥಳೀಯ ಟ್ರಾನ್ಸ್‌ಪೋರ್ಟ್ ಲಾರಿಗಳು ಲೋಡಿಂಗ್ ಮತ್ತು ಆನ್ ಲೋಡಿಂಗ್ ಚಟುವಟಿಕೆಗಳನ್ನು ಮಾಡದೇ ದಿನಗಟ್ಟಲೇ ಪ್ರಾಂಗಣದಲ್ಲಿ ಮತ್ತು ಗೋದಾಮುಗಳ ರಸ್ತೆಗಳಲ್ಲಿ ನಿಲ್ಲಿಸುತ್ತಿರುವುದರಿಂದ ಮಾರುಕಟ್ಟೆ ಪಾಂಗಣಗಳಲ್ಲಿ ವಾಹನಗಳ ದಟ್ಟಣೆ ಉಂಟಾಗಿ ಸಂಚಾರಕ್ಕೆ ಅಡೆತಡೆಯಾಗುತ್ತಿರುವುದು, ಸಾಗಾಣಿಕೆಯ ಚಟುವಟಿಕೆ ಇಲ್ಲದಂತಹ ವಾಹನಗಳನ್ನು ಮಾರುಕಟ್ಟೆ ಪ್ರಾಂಗಣದಿಂದ ಹೊರಗೆ ಕಳಿಸುವ ವ್ಯವಸ್ಥೆಯನ್ನು ಮಾಡಬೇಕು ಎಂದರು.
ಹತ್ತಿಯನ್ನು ತುಂಬಿಕೊಂಡು ಫ್ಯಾಕ್ಟರಿಗಳಲ್ಲಿ ಆನ್‌ಲೋಡ್ ಮಾಡಿ ಹಣ ಪಾವತಿ ಮಾಡುವ ಸಂದರ್ಭದಲ್ಲಿ ರಾಜೇಂದ್ರ ಗಂಜ್ ಮಾರುಕಟ್ಟೆ ಪ್ರಾಂಗಣದಲ್ಲಿ ಅಂಗಡಿಗಳ ಮುಂದೆ ಟೆಂಪೋಗಳು ಅಡ್ಡಾದಿಡ್ಡಿಯಾಗಿ ನಿಲ್ಲುತ್ತಿದ್ದು, ಅವುಗಳನ್ನೂ ಸಹ ಮಾರುಕಟ್ಟೆಯಿಂದ ಹೊರಗೆ ಕಳಸುವ ವ್ಯವಸ್ಥೆಯನ್ನು ಮಾಡಬೇಕು, ಅಲ್ಲದೇ ತಮ್ಮ ಭದ್ರತಾ ಸಿಬ್ಬಂದಿಗೆ ಕಟ್ಟುನಿಟ್ಟಿನ ಆದೇಶಗಳನ್ನು ನೀಡಿ, ಅಂತಹ ವಾಹನಗಳನ್ನು ಮಾರುಕಟ್ಟೆ ಪ್ರಾಂಗಣದಿಂದ ಹೊರ ಹಾಕುವಂತೆ ಸೂಚನೆ ನೀಡಬೇಕು ಎಂದರು. ಅಲ್ಲದೇ ರೈತರು ತಂದಂತಹ ಕೃಷಿ ಉತ್ಪನ್ನಗಳು ಕಳ್ಳತನವಾಗದಂತೆ ತಡೆಯಲು ಹೆಚ್ಚಿನ ಭದ್ರತೆ ಒದಗಿಸಬೇಕು ಎಂದರು. ಕೃಷಿ ಉತ್ಪನ್ನಗಳನ್ನು ರೈತರು ಮಾರುಕಟ್ಟೆಗೆ ಮಾರಾಟ ಮಾಡಲು ತರುವ ವಾಹನಗಳು ಪ್ರಾಂಗಣದಲ್ಲಿ ಪ್ರವೇಶಿಸುವುದಕ್ಕೆ ಮತ್ತು ಆನ್‌ಲೋಡ್ ಮಾಡುವುದಕ್ಕೆ ಸಂಬಂಧಿಸಿದಂತೆ ವ್ಯಾಪಾರ ಆಗುತ್ತಿರುವ ತೊಂದರೆಗಳನ್ನು ಗಂಭೀರವಾಗಿ ಪರಿಗಣಿಸಿ ಲಾರಿಗಳು, ಟೆಂಪೋಗಳು ಮತ್ತು ಸಣ್ಣ ಸಣ್ಣ ವ್ಯಾಹನಗಳನ್ನು ಪ್ರಾಂಗಣದಲ್ಲಿ ನಿಲ್ಲುವುದಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.