ವಾಹನ ದುರ್ಬಳಕೆ ರೂಪಾ ವಿರುದ್ಧ ಸಿಎಸ್‌ಗೆ ಬೇಳೂರು ದೂರು

ಬೆಂಗಳೂರು,ಜು.೧೮- ಸರಕಾರಿ ವಾಹನಗಳನ್ನು ಮಕ್ಕಳ ಶಾಲೆಗೆ ಬಿಡುವ ಕಾರ್ಯದಲ್ಲಿ ದುರುಪಯೋಗಪಡಿಸಿಕೊಂಡ ಕುರಿತು ಕರಕುಶಲ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ರೂಪಾ ವಿರುದ್ಧ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಲಾಗಿದೆ ಎಂದು ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಹೇಳಿದ್ದಾರೆ.
ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿ ಕೆಲಸ ಮಾಡಿದ ಸಂದರ್ಭದಲ್ಲಿ ಕಚೇರಿಗೆ ಬಾರದೆ, ವಾರಕ್ಕೊಮ್ಮೆ ಕೇವಲ ಎರಡು ಗಂಟೆಗಳ ಕಾಲ ಮಾತ್ರ ಕೆಲಸ ಮಾಡುತ್ತಿದ್ದುದ್ದನ್ನು ಪ್ರಶ್ನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
೯ ತಿಂಗಳಿನಿಂದ ವಾಹನ ಚಾಲಕರ ಮತ್ತು ಸಿಬ್ಬಂದಿಯ ಸಂಬಳ ಬಿಡುಗಡೆ ಮಾಡದೇ ಹಿಂದಿನ ಅಧ್ಯಕ್ಷರ ಮೇಲಿನ ದುರುದ್ದೇಶದಿಂದ ಕೆಲಸ ಮಾಡಿದ ಕಡೆಗಳಲ್ಲಿ ಹಿರಿಯ ಅಧಿಕಾರಿಗಳ ಮೇಲೆ ಸುಳ್ಳು ಆರೋಪ ಮಾಡಿ ವಿನಾಕಾರಣ ಜಗಳವಾಡುವುದುನ್ನು ಮುಂದುವರಿಸಿದ್ದಾರೆ ಎಂದು ದೂರಿದ್ದಾರೆ.
ರಾಜ್ಯಕರಕುಶಲ ನಿಗಮದ ಹಿಂದಿನ ಅಧ್ಯಕ್ಷರಿಗೆ ೯ ತಿಂಗಳ ಸಾರಿಗೆ ವೆಚ್ಚ, ಅಧ್ಯಕ್ಷರ ಸಿಬ್ಬಂದಿ ಮತ್ತು ವಾಹನ ಚಾಲಕನ ಸಂಬಳವನ್ನು ಜುಲೈ ೧೭ರ ಒಳಗೆ ಬಿಡುಗಡೆ ಮಾಡುವಂತೆ ಆದೇಶ ಮಾಡಿದ್ದರು. ಈವರೆಗೆ ಯಾವುದೇ ಹಣ ಬಿಡುಗಡೆ ಮಾಡದೇ ಹಿರಿಯ ಅಧಿಕಾರಿಗಳ ಮಾತಿಗೂ ಮತ್ತು ಸರ್ಕಾರದ ಆದೇಶಕ್ಕೂ ಬೆಲೆ ಕೊಟ್ಟಿರುವುದಿಲ್ಲ ಎಂದು ಆರೋಪಿಸಿದ್ದಾರೆ.
ವಾಹನ ಚಾಲಕರು ಮತ್ತು ಸಿಬ್ಬಂದಿ ಸುಮಾರು ದಿನಗಳಿಂದ ದಿನನಿತ್ಯ ಅವರ ಕಚೇರಿ ಹೊರಗೆ ಸಂಬಳಕ್ಕೋಸ್ಕರ ಕಾದುಕುಳಿತುಕೊಂಡಿದ್ದಾರೆ. ಆದರೆ ವ್ಯವಸ್ಥಾಪಕ ನಿರ್ದೇಶಕಿ ನಿಗಮದ ಕಚೇರಿಗೆ ಬರದೆ ಸಿಬ್ಬಂದಿಯನ್ನು ಕಾಯಿಸುತ್ತಿದ್ದಾರೆ ಎಂದು ದೂರಿದ್ದಾರೆ.
ತಮ್ಮ ವಿರುದ್ಧ ದಾಖಲೆರಹಿತ ಆರೋಪ ಮಾಡುತ್ತಿದ್ದು, ಹಿರಿಯರು ಮತ್ತು ಹಿತೈಷಿಗಳು ಕೊಟ್ಟ ಸಲಹೆಯಂತೆ ಅವರ ಸುಳ್ಳು ಆರೋಪಗಳಿಗೆ ಉತ್ತರ ನೀಡದೆ ಕುಳಿತಿದ್ದೆ. ಆದರೆ ಪದೇಪದೇ ನನ್ನ ಬಗ್ಗೆ ಸುಳ್ಳು ಆರೋಪಗಳ ಪಟ್ಟಿ ನೀಡಿ ಪ್ರಸಾರ ಮಾಡುವಂತೆ ವಿನಂತಿ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ನಾನು ಉತ್ತರ ನೀಡಲೇಬೇಕಾಗಿದೆ ಎಂದಿದ್ದಾರೆ.
ಒಂದೂವರೆ ಲಕ್ಷ ಬೆಲೆ ಬಾಳುವ ವಿಗ್ರಹಗಳನ್ನು ಡಿ. ರೂಪ, ಸ್ನೇಹಿತರಿಗೆ ಉಡುಗೊರೆಯಾಗಿ ನೀಡಲು ಕೇವಲ ೬೫ ಸಾವಿರ ರೂ. ಗಳಿಗೆ ತನ್ನ ಪ್ರಭಾವವನ್ನು ಸಿಬ್ಬಂದಿಗಳ ಮೇಲೆ ಬೀರಿ ಬಿಲ್ ಮಾಡಿದ್ದಾರೆ ಮತ್ತು ಆ ಹಣವನ್ನು ಕೂಡ ಇದುವರೆಗೂ ನಿಗಮಕ್ಕೆ ಪಾವತಿ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಒಂದೂವರೆ ವರ್ಷಗಳಿಂದ ಕರಕುಶಲ ಅಭಿವೃದ್ಧಿ ನಿಗಮದ ವ್ಯಸ್ಥಾಪಕ ನಿರ್ದೇಶಕಿ ಆಗಿ ನಿಗಮದಲ್ಲಿ ಟೈಮ್‌ಪಾಸ್ ಮಾಡಿಕೊಂಡು ಕಚೇರಿಗೂ ಬಾರದೆ ನಿಗಮದಲ್ಲಿ ಯಾವುದೇ ಒಂದು ನಿಗಮದ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ, ಕೀಳು ಪ್ರಚಾರದ ಹುಚ್ಚಿಗೆ ಬಿದ್ದು, ಈ ರೀತಿ ಸುಳ್ಳು ಆರೋಪ ಮತ್ತು ದಾಖಲೆರಹಿತ ಆರೋಪಗಳನ್ನು ಡಿ. ರೂಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.