ವಾಹನ ತರಬೇತಿ ಶಾಲೆಗಳ ನೌಕರರಿಗೆ ಕೋವಿಡ್ ಪರಿಹಾರ ಪ್ಯಾಕೇಜ್‍ಗೆ ಆಗ್ರಹ

ಕಲಬುರಗಿ,ಮೇ.31: ಮುಖ್ಯಮಂತ್ರಿಗಳು ಘೋಷಿಸಿರುವ ಕೋವಿಡ್ ಎರಡನೇ ಅಲೆಯ ಸೋಂಕಿನಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಪರಿಹಾರದ ಪ್ಯಾಕೇಜ್ ಘೋಷಿಸಲಾಗಿದ್ದು, ಆ ಪ್ಯಾಕೇಜ್‍ನಲ್ಲಿ ಕರ್ನಾಟಕ ರಾಜ್ಯದ ಮೋಟಾರು ವಾಹನ ತರಬೇತಿ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಪರಿಗಣಿಸಬೇಕು ಎಂದು ಜಿಲ್ಲಾ ಮೋಟರ್ ಡ್ರೈವಿಂಗ್ ಸ್ಕೂಲ್ ಓನರ್ಸ್ ಅಸೋಶಿಯೇಶನ್ ಅಧ್ಯಕ್ಷ ಆನಂದ್ ಪಾಟೀಲ್ ಅವರು ಆಗ್ರಹಿಸಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ ಅವರು, ಈಗಾಗಲೇ ಕೋವಿಡ್ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಜಾರಿಯಲ್ಲಿದ್ದು, ಕೆಲ ಶ್ರಮಿಕ ಸಮುದಾಯಗಳಿಗೆ ರಾಜ್ಯ ಸರ್ಕಾರವು ಪ್ಯಾಕೇಜ್ ಘೋಷಣೆ ಮಾಡಲಾಗಿದ್ದು, ವಾಹನ ತರಬೇತಿ ಶಾಲೆಗಳ ನೌಕರರೂ ಸಹ ಶ್ರಮಿಕ ವರ್ಗದವರಿದ್ದರೂ ಸಹ ಪ್ಯಾಕೇಜಿನಲ್ಲಿ ಪರಿಗಣಿಸಿಲ್ಲ. ಇದರಿಂದ ನೌಕರರ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯದಲ್ಲಿ ಸುಮಾರು ಎರಡು ಸಾವಿರ ವಾಹನ ತರಬೇತಿ ಶಾಲೆಗಳಿದ್ದು, ಆ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಕೆಲಸಗಾರರಿದ್ದಾರೆ. ಆದ್ದರಿಂದ ಲಾಕ್‍ಡೌನ್‍ನಲ್ಲಿ ನೌಕರರು ಜೀವನ ಸಾಗಿಸಲು ಪರಿಹಾರದ ಪ್ಯಾಕೇಜ್ ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಂಜುನಾಥ್, ಅಬ್ದುಲ್ ಖಾದರ್, ಶಿವುಕುಮಾರ್, ಅಲಿಮೋದ್ದೀನ್, ಮೊಹ್ಮದ್ ಅಲಮ್ ಮುಂತಾದವರು ಉಪಸ್ಥಿತರಿದ್ದರು.