ವಾಹನ ಡಿಕ್ಕಿ ೩೫ ಮಂದಿ ಸಾವು

ಬುರ್ಕಿನಾ, ಸೆ.೬- ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೊ ದೇಶದಲ್ಲಿ ಅಗತ್ಯ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಬೆಂಗಾವಲು ವಾಹನವೊಂದು ಸುಧಾರಿತ ಸ್ಫೋಟಕ ಸಾಧನ (ಐಇಡಿ)ಕ್ಕೆ ಗುದ್ದಿದ ಪರಿಣಾಮ ಭಾರಿ ಸ್ಫೋಟ ಸಂಭವಿಸಿ ೩೫ ನಾಗರಿಕರು ಸಾವನ್ನಪ್ಪಿದ್ದಾರೆ. ನಿನ್ನೆ ನಡೆದ ಘಟನೆಯಲ್ಲಿ ೩೭ ಮಂದಿ ಗಾಯಗೊಂಡಿದ್ದಾರೆ. ಸಾವನ್ನಪ್ಪಿದವರಲ್ಲಿ ಔಗಡೌಗೌಗೆ ವಸ್ತುಗಳನ್ನು ಖರೀದಿಸಲು ಹೋಗುತ್ತಿದ್ದ ವ್ಯಾಪಾರಿಗಳು ಮತ್ತು ಮುಂದಿನ ಶಾಲಾ ವರ್ಷಕ್ಕೆ ರಾಜಧಾನಿಗೆ ಹಿಂದಿರುಗುತ್ತಿದ್ದ ವಿದ್ಯಾರ್ಥಿಗಳೂ ಇದ್ದರು ಎನ್ನಲಾಗಿದೆ.ಪ್ರಾದೇಶಿಕ ಗವರ್ನರ್ ರೊಡಾಲ್ಫ್ ಸೊರ್ಗೊ ಮಾಹಿತಿ ನೀಡಿದ್ದು, ಜಿಬೋ ಮತ್ತು ಬೌರ್ಜಾಂಗಾ ನಡುವೆ ಘಟನೆ ಸಂಭವಿಸಿದೆ. ಮಿಲಿಟರಿ ನೇತೃತ್ವದ ಬೆಂಗಾವಲು ಪಡೆಯ ವಾಹನ ದೇಶದ ಉತ್ತರ ಭಾಗದಿಂದ ಬುರ್ಕಿನಾ ಫಾಸೊ ರಾಜಧಾನಿ ಔಗಡೌಗೌಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುತ್ತಿತ್ತು. ಈ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದೆ.
ಬೆಂಗಾವಲು ವಾಹನದಲ್ಲಿ ನಾಗರಿಕರು, ಚಾಲಕರು ಹಾಗೂ ವ್ಯಾಪಾರಿಗಳು ಸಂಚರಿಸುತ್ತಿದ್ದ ಕಾರಣ ಹೆಚ್ಚು ಸಾವುನೋವು ಸಂಭವಿಸಿದೆ. ಬೇರೆ ಬೆಂಗಾವಲು ವಾಹನದಲ್ಲಿದ್ದ ಸೈನಿಕರು ತಕ್ಷಣ ಗಾಯಾಳುಗಳ ರಕ್ಷಣೆಗೆ ಕ್ರಮ ತೆಗೆದುಕೊಂಡಿದ್ದಾರೆ. ಟ್ರಕ್ ಹಾಗೂ ಸಾರ್ವಜನಿಕ ಸಾರಿಗೆ ಬಸ್?ಗಳು ಸೇರಿದಂತೆ ಹಲವಾರು ವಾಹನಗಳಿಗೆ ಹಾನಿಯಾಗಿವೆ.