ವಾಹನ ಚಾಲಕರಿಗೆ ಆಹಾರ ಪೊಟ್ಟಣ ವಿತರಣೆ

ಮರಿಯಮ್ಮನಹಳ್ಳಿ, ಮೇ.29: ಪಟ್ಟಣಕ್ಕೆ ಸಮೀಪದ ದೇವಲಾಪುರ ಬಳಿಯ ರಾ.ಹೆ.50ರಲ್ಲಿ ಗ್ರಾ.ಪಂ. ಸದಸ್ಯ ಗುಂಡಾ ಸೋಮಣ್ಣರ ನೇತೃತ್ವದಲ್ಲಿ ಗ್ರಾಮದ ಕೆಲ ಉತ್ಸಾಹಿ ಯುವಕರು ಕಳೆದ ಒಂದು ವಾರದಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಚಾಲಕರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಿ ಹಸಿವು ನೀಗಿಸುವ ಕಾರ್ಯ ಸದ್ದಿಲ್ಲದೇ ಮಾಡುತ್ತಿದ್ದಾರೆ.
ಕೊರೋನಾ ರೋಗದ ಸೋಂಕು ಹರಡುವಿಕೆಯ ತೀವ್ರತೆ ತಗ್ಗಿಸಲು ಸರ್ಕಾರ ಘೋಷಿಸಿರುವ ಲಾಕ್‍ಡೌನ್‍ನಿಂದ ಹೊಟೆಲ್, ಡಾಬಾ, ಮೊಬೈಲ್ ಕ್ಯಾಂಟೀನ್‍ಗಳು ಮುಚ್ಚಿರುವುದರಿಂದ ಅಲೆಮಾರಿಗಳು, ಭಿಕ್ಷುಕರು ಸೇರಿದಂತೆ ಲಾರಿ ಚಾಲಕರು ಎಲ್ಲಿಯೂ ಊಟ ಸಿಗದೇ ಹಸಿವಿನಿಂದ ಬಳಲುತ್ತಿದ್ದಾರೆ. ಅವರುಗಳಿಗೆ ಸಹಾಯವಾಗುವಂತೆ ಮಾನವೀಯತೆಯ ಉದ್ದೇಶದಿಂದ ಕಳೆದ ಒಂದು ವಾರದಿಂದ ಆಹಾರದ ಪೊಟ್ಟಣಗಳನ್ನು ದೇವಲಾಪುರ ಗ್ರಾಮದ ಉತ್ಸಾಹಿ ಯುವಕರು ಹೆದ್ದಾರಿಯಲ್ಲಿ ಸಂಚರಿಸುವ ಲಾರಿಗಳು, ಕ್ಯಾಂಟರ್ ಹಾಗೂ ಇತರೆ ಎಲ್ಲಾ ವಾಹನಗಳಿಗೆ ಆಹಾರದ ಪೊಟ್ಟಣಗಳನ್ನು ನೀಡುತ್ತಿದ್ದಾರೆ.
ಪ್ರಸ್ತುತ ಇವರುಗಳಿಗೆ ಮರಿಯಮ್ಮನಹಳ್ಳಿ ಸೇರಿದಂತೆ ದೇವಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮದ ದಾನಿಗಳೂ ನೆರವಿಗೆ ನಿಂತಿರುವುದು ಪ್ರಶಂಸನೀಯ. ಅಲ್ಲದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಸಿವಿನಿಂದ ಬಳಲುವ ಲಾರಿ ಚಾಲಕರುಗಳು ಹಸಿವು ನೀಗಿಸಿದ ನೆರವಿನ ಕೈಗಳಿಗೆ ಕೃತಜ್ಞತಾ ಭಾವ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳು, ಮಿನಿ ಲಾರಿ ಹಾಗೂ ಗಣಿ ಅದಿರು ಸಾಗಿಸುವ ಲಾರಿಗಳ ಚಾಲಕರಿಗೆ ಹೊಟ್ಟೆ ತುಂಬಿಸಿ ಕೊಳ್ಳಲು ಹೆದ್ದಾರಿ ಪಕ್ಕದಲ್ಲಿದ್ದ ಡಾಬಾಗಳು ಹಾಗೂ ಸಣ್ಣಪುಟ್ಟ ಹೊಟೆಲ್ ಗೂಡಂಗಡಿಗಳೇ ಜೀವಾಳವಾಗಿದ್ದವು. ಪ್ರಸ್ತುತ ಲಾಕ್‍ಡೌನ್‍ನಿಂದ ಅವೆಲ್ಲವೂ ಮುಚ್ಚಿದ್ದು, ಚಾಲಕರ ಹಸಿವು ನೀಗಿಸಲು ಊಟದ ಪೊಟ್ಟಣಗಳನ್ನು ವಿತರಿಸಲು ಮುಂದಾಗಿದ್ದೇವೆ ಎಂದು ಗುಂಡಾಸ್ವಾಮಿ, ಶಾವಪ್ಪ ಉಪ್ಪಾರ, ವೆಂಕಟೇಶ ಉಪ್ಪಾರ, ರಾಘವೇಂದ್ರ ಉಪ್ಪಾರ, ರಾಜು, ಉದಯ, ಹಾಲೇಶ್, ಶಿವರಾಮ್ ಪತ್ರಿಕೆಗೆ ಪ್ರತಿಕ್ರಿಯಿಸಿದರು.